ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ರೋಚಕ ಘಟ್ಟ ತಲುಪಿದ್ದು, ಟಾಪ್ 4 ಸ್ಥಾನಗಳಿಗಾಗಿ ತಂಡಗಳ ನಡುವೆ ಪೈಪೋಟಿ ಎದ್ದಿದೆ.
ಸದ್ಯ ಎಲ್ಲರ ಚಿತ್ರ ಟಾಪ್ 4 ಸ್ಥಾನಗಳನ್ನು ಪಡೆದು ಯಾವ ತಂಡಗಳು ಪ್ಲೇಆಫ್ ಟಿಕೆಟ್ ಪಡೆದುಕೊಳ್ಳಲಿವೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಇನ್ನು ಇದೇ ಸಮಯಕ್ಕೆ ಪ್ಲೇಆಫ್ ಕುರಿತು ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಪ್ಲೇಆಫ್‌ನ ಯಾವ ಪಂದ್ಯವೂ ಬೆಂಗಳೂರಿನಲ್ಲಿ ನಡೆಯುವುದಿಲ್ಲ ಬದಲಾಗಿ ಅಹ್ಮದಾಬಾದ್‌ಗೆ ಸ್ಥಳಾಂತರಗೊಂಡಿದೆ ಎನ್ನಲಾಗಿದೆ.
ಹೌದು, ಸ್ಪೋರ್ಟ್ಸ್ ರಿಪೋರ್ಟರ್ ಅಭಿಷೇಕ್ ತ್ರಿಪಾಠಿ ಪ್ರಕಾರ ಈ ಬಾರಿಯ ಐಪಿಎಲ್ ಫೈನಲ್ ಸಹ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎನ್ನಲಾಗಿದೆ. ಇನ್ನು ಇದಕ್ಕೆ ಕಾರಣವನ್ನೂ ಸಹ ಅಭಿಷೇಕ್ ತ್ರಿಪಾಠಿ ಬಿಚ್ಚಿಟ್ಟಿದ್ದು, ಚಿನ್ನಸ್ವಾಮಿ ಪಂದ್ಯಗಳ ಟಿಕೆಟ್‌ಗಳಿಗಾಗಿ ಕರ್ನಾಟಕದ ರಾಜಕಾರಣಿಗಳು ಕಿತ್ತಾಟ ನಡೆಸಿದ್ದೇ ಕಾರಣ ಎಂದಿದ್ದಾರೆ.
ಇನ್ನು ಫೈನಲ್ ಪಂದ್ಯ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಸ್ಥಳಾಂತರವಾಗಿದ್ದರೆ, ಮೊದಲ ಕ್ವಾಲಿಫಯರ್ ಪಂದ್ಯ ಧರ್ಮಶಾಲಾ, ಎಲಿಮಿನೇಟರ್ ಹಾಗೂ ಎರಡನೇ ಕ್ವಾಲಿಫಯರ್ ಪಂದ್ಯ ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಅಭಿಷೇಕ್ ಮಾಹಿತಿ ನೀಡಿದ್ದಾರೆ.
ಟೂರ್ನಿಯ ಆರಂಭದಲ್ಲಿ ಈ ಬಾರಿಯ ಫೈನಲ್ ಪಂದ್ಯ ಹಾಗೂ ಪ್ಲೇಆಫ್‌ನ ಒಂದು ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿಯಲ್ಲೇ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಇದೂ ಸಹ ಇಲ್ಲದಂತಾಗಿದ್ದು, ಲೀಗ್ ಹಂತದಲ್ಲಿ ಆರ್‌ಸಿಬಿ ತವರಿನಲ್ಲಿ ಆಡಿದ ಐದು ಪಂದ್ಯಗಳಷ್ಟೇ ಅಭಿಮಾನಿಗಳ ಪಾಲಿಗೆ ಸಿಕ್ಕಂತಾಗಿದೆ.

