HomeIPL 2026IPL 2026: ಸಂಜು ಶತಕ, ಓವರ್‌ಟನ್ ಉತ್ತಮ ಬೌಲಿಂಗ್; ಡೆಲ್ಲಿ ಮಣಿಸಿ ಗೆಲುವಿನ ಖಾತೆ ತೆರೆದ...

IPL 2026: ಸಂಜು ಶತಕ, ಓವರ್‌ಟನ್ ಉತ್ತಮ ಬೌಲಿಂಗ್; ಡೆಲ್ಲಿ ಮಣಿಸಿ ಗೆಲುವಿನ ಖಾತೆ ತೆರೆದ ಚೆನ್ನೈ

ಚೆನ್ನೈನ ಎಂಎ ಚಿದಂಬಂರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 18ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 23 ರನ್‌ಗಳ ಗೆಲುವನ್ನು ದಾಖಲಿಸಿ ಜಯದ ಖಾತೆ ತೆರೆದಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆರಿಸಿಕೊಂಡು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಚೆನ್ನೂ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್ ಶತಕ ಹಾಗೂ ಆಯುಷ್ ಮ್ಹಾತ್ರೆ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 213 ರನ್‌ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಎಡವಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲ್ಔಟ್ ಆಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ನಾಯಕ ರುತುರಾಜ್ ಗಾಯಕ್ವಾಡ್ 18 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿ ನಿರಾಸೆ ಮೂಡಿಸಿದರೆ, ಮತ್ತೋರ್ವ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಶತಕ ಬಾರಿಸುವ ಮೂಲಕ ಫಾರ್ಮ್ ಕಂಡುಕೊಂಡಿದ್ದಾರೆ. 56 ಎಸೆತಗಳಲ್ಲಿ 15 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 115 ರನ್ ಬಾರಿಸಿದರು. ಎರಡನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್ ಜತೆಯಾದ ಆಯುಷ್ ಮ್ಹಾತ್ರೆ 36 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 59 ರನ್ ಗಳಿಸಿ ರಿಟೈರ್ಡ್ ಹರ್ಟ್ ಔಟ್ ಆದರು. ಸಂಜು ಸ್ಯಾಮ್ಸನ್ ಹಾಗೂ ಆಯುಷ್ ಮ್ಹಾತ್ರೆ 113 ರನ್‌ಗಳ ಜತೆಯಾಟವನ್ನಾಡಿ ಆರಂಭಿಕ ಆಘಾತ ಅನುಭವಿಸಿದ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಆಸರೆಯಾದರು. ಶಿವಮ್ ದುಬೆ 10 ಎಸೆತಗಳಲ್ಲಿ ಅಜೇಯ 20 ರನ್ ಗಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕ ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರು.

ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪತುಮ್ ನಿಸ್ಸಂಕ ಹಾಗೂ ಕೆಎಲ್ ರಾಹುಲ್ 61 ರನ್‌ಗಳ ಜತೆಯಾಟವನ್ನಾಡಿ ಇಬ್ಬರೂ ಸಾಲಾಗಿ ವಿಕೆಟ್ ಒಪ್ಪಿಸಿದರು. ಕೆಎಲ್ ರಾಹುಲ್ 10 ಎಸೆತಗಳಲ್ಲಿ 18 ರನ್ ಗಳಿಸಿದರೆ, 24 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 41 ರನ್ ಬಾರಿಸಿದರು. ಈ ಇಬ್ಬರ ಬಳಿಕ ಟ್ರಿಸ್ಟನ್ ಸ್ಟಬ್ಸ್ ಹೊರತುಪಡಿಸಿ ಕಣಕ್ಕಿಳಿದ ಇತರೆ ಆಟಗಾರರು ಜವಾಬ್ದಾರಿಯುತ ಆಟವನ್ನಾಡುವಲ್ಲಿ ಯಶಸ್ವಿಯಾಗಲಿಲ್ಲ. ಸಮೀರ್ ರಿಜ್ವಿ 6, ಅಕ್ಷರ್ ಪಟೇಲ್ 1, ಡೇವಿಡ್ ಮಿಲ್ಲರ್ 17, ಅಶುತೋಷ್ ಶರ್ಮಾ 19, ಆಖಿಬ್ ನಬಿ ಧರ್ 4, ಕುಲ್‌ದೀಪ್ ಯಾದವ್ 4, ಲುಂಗಿ ಎನ್‌ಗಿಡಿ 3, ಟಿ ನಟರಾಜನ್ ಅಜೇಯ 1 ರನ್ ಹಾಗೂ ಟ್ರಿಸ್ಟನ್ ಸ್ಟಬ್ಸ್ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 60 ರನ್ ಬಾರಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಪರ ಜೇಮಿ ಓವರ್‌ಟನ್ ನಾಲ್ಕು ವಿಕೆಟ್, ಅನ್ಶುಲ್ ಕಾಂಬೋಜ್ ಮೂರು ವಿಕೆಟ್, ಖಲೀಲ್ ಅಹ್ಮದ್, ಗುರ್ಜಪ್‌ನೀತ್ ಸಿಂಗ್ ಹಾಗೂ ನೂರ್ ಅಹ್ಮದ್ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular