ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೆಸ್ಟ್ ಇಂಡಿಯನ್ ಸ್ಪಿನ್ನರ್ ಅಕೀಲ್ ಹೊಸೈನ್ ಸಂಚಲನ ಮೂಡಿಸಿದ್ದಾರೆ. ಕೇವಲ 17 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆಯುವ ಮೂಲಕ ಸಿಎಸ್‌ಕೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಅಕೀಲ್, ತಮ್ಮ ಆಟದ ಶೈಲಿಯಿಂದಾಗಿ ಅಭಿಮಾನಿಗಳಿಗೆ ‘ಜಡೇಜಾ’ ಅವರನ್ನು ನೆನಪಿಸಿದ್ದಾರೆ.
ವೈರಲ್ ಆದ 13 ವರ್ಷಗಳ ಹಳೆಯ ಟ್ವೀಟ್ ಅಕೀಲ್ ಹೊಸೈನ್ ಅವರ ಈ ಭರ್ಜರಿ ಪ್ರದರ್ಶನದ ಬೆನ್ನಲ್ಲೇ ಅವರ 2013ರ ಹಳೆಯ ಟ್ವೀಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಆ ಸಮಯದಲ್ಲಿ ಇನ್ನೂ ಯಾವುದೇ ಪ್ರಮುಖ ಪಂದ್ಯಗಳನ್ನು ಆಡದಿದ್ದ 20 ವರ್ಷದ ಅಕೀಲ್, ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಬಗ್ಗೆ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದರು. ಇಂದು ಅದೇ ಜಡೇಜಾ ಅವರಂತೆ ಎಡಗೈ ಸ್ಪಿನ್ ಮೂಲಕ ಎದುರಾಳಿಗಳನ್ನು ಕಟ್ಟಿಹಾಕುತ್ತಿರುವ ಅಕೀಲ್ ಅವರ ಪ್ರದರ್ಶನ ‘ಕನಸು ನನಸಾದ ಕ್ಷಣ’ದಂತೆ ಭಾಸವಾಗುತ್ತಿದೆ.
ವಾಂಖೆಡೆಯಲ್ಲಿ ಅಕೀಲ್ ಅಧಿಪತ್ಯ 2026ರ ಐಪಿಎಲ್ ಹರಾಜಿನಲ್ಲಿ ಸಿಎಸ್‌ಕೆ ತಂಡವು ಅಕೀಲ್ ಅವರನ್ನು 2 ಕೋಟಿ ರೂಪಾಯಿಗೆ ಖರೀದಿಸಿತ್ತು. ಮುಂಬೈ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಅಕೀಲ್, ಮೊದಲ ಓವರ್‌ನಲ್ಲೇ ವಿಕೆಟ್ ಮೇಡನ್ ಮಾಡುವ ಮೂಲಕ ಮುಂಬೈ ಬ್ಯಾಟರ್‌ಗಳಿಗೆ ಶಾಕ್ ನೀಡಿದರು. ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಪ್ರಮುಖ ವಿಕೆಟ್ ಪಡೆದು ಮುಂಬೈ ತಂಡದ ಬೆನ್ನೆಲುಬು ಮುರಿದರು.
ಬ್ರಾವೋ ನೀಡಿದ ಸಲಹೆ ಪಂದ್ಯದ ನಂತರ ಮಾತನಾಡಿದ ಅಕೀಲ್ ಹೊಸೈನ್, “ಡ್ವೇನ್ ಬ್ರಾವೋ ಅವರು ನನಗೆ ಒಂದು ಕಿವಿಮಾತು ಹೇಳಿದ್ದರು. ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡುವಾಗ ಸಿಕ್ಸರ್ ತಿನ್ನುವ ಭಯ ಬಿಡಬೇಕು, ಕೇವಲ ನಿನ್ನ ಯೋಜನೆ ಮತ್ತು ಬ್ಯಾಟರ್‌ನ ದೌರ್ಬಲ್ಯದ ಮೇಲೆ ಗಮನ ಹರಿಸು ಎಂದು ಹೇಳಿದ್ದರು. ಅದೇ ನನಗೆ ಇಂದು ಸಹಾಯ ಮಾಡಿತು” ಎಂದಿದ್ದಾರೆ.
ಸಿಎಸ್‌ಕೆ ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 26 ರಂದು ಚೆನ್ನೈನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಅಕೀಲ್ ಅವರ ಈ ಫಾರ್ಮ್ ಚೆನ್ನೈ ತಂಡದ ಬಲವನ್ನು ಹೆಚ್ಚಿಸಿದೆ.


