HomeIPL 2026IPL 2026: ಏನಾಯಿತೆಂದು ನನಗೆ ಈಗಲೂ ಅರ್ಥವಾಗುತ್ತಿಲ್ಲ, ಅವರಿಬ್ಬರಿಂದ ಪಂದ್ಯ ಸೋತೆವು; ಆರ್‌ಸಿಬಿ ವಿರುದ್ಧದ ಹೀನಾಯ...

IPL 2026: ಏನಾಯಿತೆಂದು ನನಗೆ ಈಗಲೂ ಅರ್ಥವಾಗುತ್ತಿಲ್ಲ, ಅವರಿಬ್ಬರಿಂದ ಪಂದ್ಯ ಸೋತೆವು; ಆರ್‌ಸಿಬಿ ವಿರುದ್ಧದ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಅಕ್ಷರ್

ನಿನ್ನೆ ( ಏಪ್ರಿಲ್ 27 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 39ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ವಿಕೆಟ್‌ಗಳ ಅಬ್ಬರದ ಗೆಲುವನ್ನು ದಾಖಲಿಸಿತು.

ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಬೌಲಿಂಗ್ ಆರಿಸಿಕೊಂಡು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ 16.3 ಓವರ್‌ಗಳಲ್ಲಿ 75 ರನ್‌ಗೆ ಆಲ್‌ಔಟ್ ಆಗಿ ಆರ್‌ಸಿಬಿಗೆ 76 ರನ್‌ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6.3 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 77 ರನ್ ಬಾರಿಸಿತು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎರಡನೇ ಎಸೆತದಲ್ಲೇ ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರೀ ಹಿನ್ನಡೆ ಅನುಭವಿಸಿತು. ಭುವನೇಶ್ವರ್ ಕುಮಾರ್ ಎಸೆದ ಎಸೆತಕ್ಕೆ ಸಹಿಲ್ ಪರಾಖ್ ಕ್ಲೀನ್ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿಕೊಂಡರು. ಬೆನ್ನಲ್ಲೇ ಕೆಎಲ್ ರಾಹುಲ್ 1 ರನ್, ಸಮೀರ್ ರಿಜ್ವಿ ಡಕ್‌ಔಟ್‌, ಟ್ರಿಸ್ಟನ್ ಸ್ಟಬ್ಸ್ 5, ಅಕ್ಷರ್ ಪಟೇಲ್ ಡಕ್‌ಔಟ್ ಹಾಗೂ ನಿತಿಶ್ ರಾಣಾ ಕೇವಲ 1 ರನ್ ಗಳಿಸಿ ಔಟ್ ಆದರು. ಈ ಮೂಲಕ ಕೇವಲ 8 ರನ್‌ಗೆ ಡೆಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಏಳನೇ ಜತೆಯಾದ ಡೇವಿಡ್ ಮಿಲ್ಲರ್ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಅಭಿಷೇಕ್ ಪೊರೆಲ್ ಹಾಗೂ ಡೇವಿಡ್ ಮಿಲ್ಲರ್ 35 ರನ್‌ಗಳ ಜತೆಯಾಟವಾಡಿ ತುಸು ಸುಧಾರಣೆ ತಂದರಾದರೂ ಹೆಚ್ಚು ಹೊತ್ತು ಇನ್ನಿಂಗ್ಸ್ ಸಾಗಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿ ತವರಿನಲ್ಲೇ ಮುಖಭಂಗ ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರಿಗೆ ಪವರ್‌ಪ್ಲೇನಲ್ಲಿ ಏನಾಯಿತು ಎಂಬುದೇ ಯಕ್ಷಪ್ರಶ್ನೆಯಾಗಿ ಉಳಿದುಕೊಂಡಿತು. ಬಂದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳನ್ನೆಲ್ಲ ಹೇಜಲ್‌ವುಡ್ ಹಾಗೂ ಭುವನೇಶ್ವರ್ ಜೋಡಿ ಪೆವಿಲಿಯನ್‌ಗೆ ವಾಪಸ್ ಕಳುಹಿಸಿತ್ತು.

ಈ ಮಹಾ ಸೋಲಿನ ಕುರಿತು ಪಂದ್ಯ ಮುಗಿದ ಬಳಿಕ ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ‘ಏನಾಯಿತು ಎಂದು ನನಗೆ ಈಗಲೂ ಅರ್ಥವಾಗುತ್ತಿಲ್ಲ. ಆದರೆ ಕ್ರಿಕೆಟ್‌ನಲ್ಲಿ ಎಲ್ಲರೂ ನಡೆದ ಪಂದ್ಯವನ್ನು ಮರೆತು ಮುಂದಿನ ಪಂದ್ಯದಲ್ಲಿ ಪುಟಿದೇಳಬೇಕು ಎನ್ನುತ್ತಾರೆ. ಹಾಗೆಯೇ ನಾವೂ ಸಹ ಈ ಪಂದ್ಯವನ್ನು ಮರೆತು ಮುಂದಿನ ಪಂದ್ಯದಲ್ಲಿ ಕಮ್‌ಬ್ಯಾಕ್‌ ಮಾಡುವತ್ತ ಚಿತ್ತ ನೆಟ್ಟಿದ್ದೇವೆ. ಐಪಿಎಲ್ ಒಂದು ಕಠಿಣ ಟೂರ್ನಿ. ಎಲ್ಲ ದಿನವೂ ಸುಲಭವಾಗಿ ಇರಲಿದೆ ಎಂದು ಹೇಳಲಾಗುವುದಿಲ್ಲ. ಹಾಗೆಯೇ ನಡೆದಿದ್ದನ್ನು ನೆನಪಿಸಿಕೊಂಡು ಕೂರುವ ಹಾಗಿಲ್ಲ. ಮುಂದಿನ ಪಂದ್ಯದ ಕಡೆ ಗಮನಹರಿಸಬೇಕು. ಇದನ್ನೇ ಯೋಚಿಸುತ್ತಾ ನೆಗೆಟಿವ್ ಯೋಚನೆ ಬಂದರೆ ಮುಂದಿನ ಪಂದ್ಯಗಳಲ್ಲಿ ಸೋಲನ್ನು ಕಾಣಬೇಕಾಗುತ್ತದೆ, ಹಾಗೆಯೇ ಪಾಸಿಟಿವ್ ಯೋಚನೆ ಮಾಡಿದರೆ ಮುಂದಿನ ಪಂದ್ಯಗಳಲ್ಲಿ ಚೆನ್ನಾಗಿ ಆಡಬಹುದು. ಅದನ್ನೇ ನಾನು ನನ್ನ ತಂಡಕ್ಕೂ ಸಹ ಹೇಳುತ್ತೇನೆ. ಒಂದು ಕೆಟ್ಟ ಪಂದ್ಯದಿಂದ ನಮ್ಮ ಬ್ಯಾಟ್ಸ್‌ಮನ್‌ಗಳತ್ತ ಬೆರಳು ತೋರಿಸಿ ಸೋಲಿಗೆ ಅವರೇ ಕಾರಣ ಎನ್ನಲಾಗುವುದಿಲ್ಲ. ಜೋಶ್ ಹೇಜಲ್‌ವುಡ್ ಹಾಗೂ ಭುವನೇಶ್ವರ್ ಕುಮಾರ್ ವಿಶ್ವಶ್ರೇಷ್ಠ ಬೌಲರ್‌ಗಳು, ಅವರು ಎಲ್ಲಿ ಬೇಕಾದರೂ ಬಾಲ್ ಸ್ವಿಂಗ್ ಮಾಡುತ್ತಾರೆ. ನಮ್ಮ ತಂಡದ ಬ್ಯಾಟ್ಸ್‌ಮನ್‌ಗಳು ಆರಂಭದ ಓವರ್‌ಗಳಲ್ಲಿ ತುಸು ಜಾಗರೂಕತೆಯಿಂದ ಆಟವಾಡಿದ್ದರೆ ಪಂದ್ಯ ಬೇರೆ ರೀತಿ ಇರುತ್ತಿತ್ತು. ಎಲ್ಲ ಕ್ರೆಡಿಟ್ ಹೇಜಲ್‌ವುಡ್ ಹಾಗೂ ಭುವನೇಶ್ವರ್‌ರಿಗೆ ಸೇರಬೇಕು’ ಎಂದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular