ನಿನ್ನೆ ( ಮೇ 18 ) ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 63ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 5 ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತು. ಜತೆಗೆ ಗುಜರಾತ್ ಟೈಟನ್ಸ್ ಸಹ ಪ್ಲೇಆಫ್ ಸುತ್ತಿಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿತು.
ಹೀಗೆ ಈ ಒಂದು ಗೆಲುವಿನ ಮೂಲಕ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟನ್ಸ್ ಎರಡೂ ತಂಡಗಳೂ ಪ್ಲೇಆಫ್‌ಗೆ ತಲುಪುವ ಮೂಲಕ ಈ ಬಾರಿಯ ಟೂರ್ನಿಯ ಪ್ಲೇಆಫ್ ಕಾಳಗಕ್ಕೆ ಆರ್‌ಸಿಬಿ, ಗುಜರಾತ್ ಹಾಗೂ ಹೈದರಾಬಾದ್ ಮೂರು ತಂಡಗಳು ಕ್ವಾಲಿಫೈ ಆಗಿದ್ದು, ಉಳಿದ ಒಂದು ಸ್ಥಾನದ ಅರ್ಹತೆಯನ್ನು ಯಾವ ತಂಡ ಗಿಟ್ಟಿಸಿಕೊಳ್ಳಲಿದೆ ಎಂಬ ಕುತೂಹಲ ಈಗ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.
ನೆನಪಿಡಿ ಈ ಹಂತಕ್ಕೆ ಟೂರ್ನಿಯಿಂದ ಹೊರಬಿದ್ದಿರುವುದು ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಎರಡು ತಂಡಗಳು ಮಾತ್ರ. ಹೀಗಾಗಿ ಉಳಿದ ಐದು ತಂಡಗಳಿಗೂ ಸಹ ಉಳಿದೊಂದು ಪ್ಲೇಆಫ್ ಸ್ಥಾನ ಅಲಂಕರಿಸಲು ಸಾಧ್ಯತೆಗಳಿವೆ. ಹಾಗಿದ್ದರೆ ಆ ಐದು ತಂಡಗಳ ಪೈಕಿ ಯಾವ ತಂಡಗಳು ಮುಂದಿನ ಪಂದ್ಯಗಳಲ್ಲಿ ಯಾವ ರೀತಿಯ ಫಲಿತಾಂಶ ಪಡೆದರೆ ಪ್ಲೇಆಫ್‌ಗೆ ಯಶಸ್ವಿಯಾಗಿ ತಲುಪಲಿವೆ ಎಂಬ ಮಾಹಿತಿ ಮುಂದಿದೆ.
ಪಂಜಾಬ್ ಕಿಂಗ್ಸ್: ಈ ತಂಡ 13 ಅಂಕಗಳನ್ನು ಹೊಂದಿದ್ದು, ಇನ್ನೂ ಒಂದು ಪಂದ್ಯವನ್ನಾಡುವುದು ಬಾಕಿ ಇದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯುವ ಈ ಪಂದ್ಯ ಗೆದ್ದರೆ ಅಂಕ 15 ಆಗಲಿದೆ. ಹೀಗೆ 15 ಅಂಕ ಪಡೆದ ಮಾತ್ರಕ್ಕೆ ಪಂಜಾಬ್ ಪ್ಲೇಆಫ್ ತಲುಪಲ್ಲ. ಪಂಜಾಬ್ 15 ಅಂಕದ ಜತೆ ಪ್ಲೇಆಫ್ ತಲುಪಬೇಕೆಂದರೆ ಲಕ್ನೋವನ್ನು ಕಡ್ಡಾಯವಾಗಿ ಸೋಲಿಸಲೇಬೇಕು, ರಾಜಸ್ಥಾನ್ ರಾಯಲ್ಸ್ ಉಳಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಕಡ್ಡಾಯವಾಗಿ ಸೋಲಲೇಬೇಕು, ಕೆಕೆಆರ್ ಒಂದು ಪಂದ್ಯವನ್ನು ಸೋಲಬೇಕು. ಒಂದು ವೇಳೆ ಕೆಕೆಆರ್ ಎರಡೂ ಪಂದ್ಯಗಳನ್ನು ಗೆದ್ದು ಪಂಜಾಬ್ ರೀತಿಯೇ 15 ಅಂಕ ಪಡೆದರೆ ಪಂಜಾಬ್ ನೆಟ್ ರನ್‌ರೇಟ್‌ನಲ್ಲಿ ಕೆಕೆಆರ್‌ಗಿಂತ ಮುಂದಿರಲೇಬೇಕು.
ರಾಜಸ್ಥಾನ್ ರಾಯಲ್ಸ್: ಈ ತಂಡಕ್ಕೆ ಉಳಿಕೆ ಎರಡು ಪಂದ್ಯಗಳಿದ್ದು, ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಈ ಎರಡೂ ಪಂದ್ಯಗಳಲ್ಲಿ ರಾಜಸ್ಥಾನ್ ಗೆದ್ದರೆ ಅಲ್ಲಿಗೆ ನೇರವಾಗಿ ಪ್ಲೇಆಫ್ ತಲುಪಲಿದ್ದು, ಉಳಿದ ತಂಡಗಳು ಎಲಿಮಿನೇಟ್ ಆಗಲಿವೆ. ಆದರೆ ಒಂದು ವೇಳೆ ರಾಜಸ್ಥಾನ್ ಈ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದು 14 ಅಂಕ ಪಡೆದರೆ ಆಗ, ಪಂಜಾಬ್, ಚೆನ್ನೈ ಹಾಗೂ ಡೆಲ್ಲಿ ತಮ್ಮ ಉಳಿದ ಪಂದ್ಯಗಳನ್ನು ಸೋಲಬೇಕು ಹಾಗೂ ಮುಂಬೈ ಇಂಡಿಯನ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಬೇಕು.
ಚೆನ್ನೈ ಸೂಪರ್ ಕಿಂಗ್ಸ್: ತಂಡ 12 ಅಂಕಗಳನ್ನು ಹೊಂದಿದ್ದು, ಗುಜರಾತ್ ವಿರುದ್ಧದ ಪಂದ್ಯ ಗೆದ್ದರೆ 14 ಅಂಕಗಳನ್ನು ಹೊಂದಲಿದೆ. ಈ ಅಂಕದೊಂದಿಗೆ ಚೆನ್ನೈ ಪ್ಲೇಆಫ್ ತಲುಪಬೇಕೆಂದರೆ ರಾಜಸ್ಥಾನ್ ಕಡ್ಡಾಯವಾಗಿ ಎರಡೂ ಪಂದ್ಯಗಳನ್ನು ಸೋತು 12 ಅಂಕಗಳಲ್ಲೇ ಉಳಿಯಬೇಕು, ಪಂಜಾಬ್ ಲಕ್ನೋ ವಿರುದ್ಧ ಸೋತು 13 ಅಂಕಗಳಲ್ಲೇ ಉಳಿಯಬೇಕು. ಹಾಗೆಯೇ ಕೆಕೆಆರ್ ಡೆಲ್ಲಿಯನ್ನು ಮಣಿಸಬೇಕು ಮತ್ತು ಮುಂಬೈ ವಿರುದ್ಧ ಸೋಲಬೇಕು. ಹೀಗಾದಾಗ ಕೆಕೆಆರ್ 13 ಹಾಗೂ ಡೆಲ್ಲಿ 12 ಅಂಕಗಳೊಂದಿಗೆ ಅಂತ್ಯಗೊಳ್ಳಲಿದ್ದು, ಚೆನ್ನೈ ಕ್ವಾಲಿಫೈ ಆಗಲಿದೆ. ಹಾಗೆಯೇ ಡೆಲ್ಲಿ ಹಾಗೂ ರಾಜಸ್ಥಾನ್ ಒಂದು ಪಂದ್ಯವನ್ನು ಗೆದ್ದು ಚೆನ್ನೈ ಸಹ ಒಂದು ಪಂದ್ಯ ಗೆದ್ದರೆ ಮೂರು ತಂಡಗಳೂ 14 ಅಂಕ ಹೊಂದಲಿದ್ದು, ನೆಟ್ ರನ್‌ರೇಟ್ ಪ್ರಮುಖವಾಗಲಿದೆ.
ಡೆಲ್ಲಿ ಕ್ಯಾಪಿಟಲ್ಸ್: 12 ಅಂಕ ಹೊಂದಿರುವ ಡೆಲ್ಲಿ -0.871 ನೆಟ್ ರನ್‌ರೇಟ್ ಹೊಂದಿರುವುದು ಅತಿ ಕೆಟ್ಟ ಅವಸ್ಥೆಯಾಗಿದೆ. ಹೀಗಾಗಿ ಉಳಿದ ಪಂದ್ಯ ಗೆದ್ದು 14 ಅಂಕಗಳೊಂದಿಗೆ ಡೆಲ್ಲಿ ಕ್ವಾಲಿಫೈ ಆಗಬೇಕೆಂದರೆ ಪಂಜಾಬ್, ಚೆನ್ನೈ ಹಾಗೂ ರಾಜಸ್ಥಾನ್ ಉಳಿದ ತಮ್ಮ ಉಳಿದ ಪಂದ್ಯಗಳನ್ನು ಸೋಲಲೇಬೇಕಿದೆ.
ಕೊಲ್ಕತ್ತಾ ನೈಟ್ ರೈಡರ್ಸ್: ಸದ್ಯ 11 ಅಂಕಗಳನ್ನು ಹೊಂದಿರುವ ಕೆಕೆಆರ್‌ಗೆ ಇನ್ನೂ ಎರಡು ಪಂದ್ಯಗಳಿದ್ದು, ಈ ಎರಡರಲ್ಲೂ ಗೆದ್ದರೆ 15 ಅಂಕಗಳಾಗಲಿವೆ. ಈ ಅಂಕದೊಂದಿಗೆ ಕೆಕೆಆರ್ ಪ್ಲೇಆಫ್ ತಲುಪಬೇಕೆಂದರೆ ಪಂಜಾಬ್ ಲಕ್ನೋ ವಿರುದ್ಧ ಸೋಲಬೇಕು ಹಾಗೂ ರಾಜಸ್ಥಾನ್ ಒಂದು ಪಂದ್ಯದಲ್ಲಿ ಸೋಲಬೇಕು. ಒಂದು ವೇಳೆ ರಾಜಸ್ಥಾನ್ ಒಂದು ಪಂದ್ಯ ಸೋತು, ಪಂಜಾಬ್ ಹಾಗೂ ಕೆಕೆಆರ್ ಉಳಿದ ಪಂದ್ಯಗಳನ್ನು ಗೆದ್ದರೆ ಆಗ ಕೆಕೆಆರ್ ಹಾಗೂ ಪಂಜಾಬ್ ನಡುವೆ ನೆಟ್ ರನ್‌ರೇಟ್ ಲೆಕ್ಕಾಚಾರ ಮುಖ್ಯವಾಗಲಿದೆ.

