ಹರಿಯಾಣ: ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಶೀಲು ಬಲ್ಹಾರಾ ಅವರ 23 ವರ್ಷದ ಪತ್ನಿ ಮುಸ್ಕಾನ್ ಶುಕ್ರವಾರ ಮಧ್ಯಾಹ್ನ ಹರಿಯಾಣದ ರೋಹ್ತಕ್ ಜಿಲ್ಲೆಯಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ರೋಹ್ತಕ್ನ ಮೆಹಮ್ ಪ್ರದೇಶದ ನಿವಾಸಿಯಾಗಿದ್ದ ಮುಸ್ಕಾನ್ ಅವರು 2023ರ ಡಿಸೆಂಬರ್ನಲ್ಲಿ ಶೀಲು ಬಲ್ಹಾರಾ ಅವರನ್ನು ವಿವಾಹವಾಗಿದ್ದರು. ಕಳೆದ ವರ್ಷದ ನವೆಂಬರ್ನಲ್ಲಿ ದಂಪತಿಗೆ ಹಾರ್ದಿಕ್ ಎಂಬ ಗಂಡು ಮಗು ಜನಿಸಿತ್ತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ವಿಧಿವಿಜ್ಞಾನ (ಫೊರೆನ್ಸಿಕ್) ತಜ್ಞರ ತಂಡವೂ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ವರದಿಗಳ ಪ್ರಕಾರ, ಆತ್ಮಹತ್ಯೆಗೆ ಒಂದು ದಿನ ಮೊದಲು ಮುಸ್ಕಾನ್ ಅವರು ಪಂಜಾಬಿ ಹಾಡೊಂದಕ್ಕೆ ರೀಲ್ ಪೋಸ್ಟ್ ಮಾಡಿದ್ದರು.ಈ ಘಟನೆ ಕೆಲವೇ ದಿನಗಳ ಹಿಂದೆ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದ ಬೆನ್ನಲ್ಲೇ ನಡೆದಿದೆ. ಪತಿ ಹಾಗೂ ಅತ್ತೆ-ಮಾವನಿಂದ ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆ ಅನುಭವಿಸುತ್ತಿದ್ದ ಕಾರಣ ಅವರು ಈ ಕೃತ್ಯಕ್ಕೆ ಮುಂದಾಗಿದ್ದರು ಎಂದು ಆರೋಪಿಸಲಾಗಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಸ್ಕಾನ್ ಅವರ ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.

