ಬೆಂಗಳೂರು: ಮೊಟ್ಟೆಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ಜಿನೋಟಾಕ್ಸಿಕ್ ಅಂಶ ಪತ್ತೆಯಾಗಿದೆ ಎನ್ನುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಸತ್ಯ ತಿಳಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಆಹಾರ ಮತ್ತು ಗುಣಮಟ್ಟ ಇಲಾಖೆ ಆಯುಕ್ತರಿಂದ ಮಾಹಿತಿ ಸಂಗ್ರಹಿಸಿ ಅಗತ್ಯವಿದ್ದಲ್ಲಿ ಮೊಟ್ಟೆಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಎನ್ನುವ ವದಂತಿ ಹರಡಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸದ್ಯ ಜನ ಮೊಟ್ಟೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಮೊಟ್ಟೆ ಕ್ಯಾನ್ಸರ್ ಕಾರಕ ಎಂಬ ವದಂತಿ ಹಿನ್ನೆಲೆಯಲ್ಲಿ ಇದರ ಹಿನ್ನೆಲೆ ಏನು? ಯಾರು ಇದನ್ನು ಪರೀಕ್ಷಿಸಿದ್ದಾರೆ? ವೈಜ್ಞಾನಿಕವಾಗಿ ಯಾವ ಮಟ್ಟದಲ್ಲಿ ಆಗಿದೆ ಎನ್ನುವ ಅಂಶಗಳನ್ನು ತಿಳಿಯಬೇಕಾಗುತ್ತದೆ. ನಂತರ ಅಗತ್ಯವಿದ್ದರೆ ಮೊಟ್ಟೆಗಳನ್ನು ಪರೀಕ್ಷಿಸಲಾಗುವುದು ಎಂದು ಹೇಳಿದ್ದಾರೆ.
ಜನಪ್ರಿಯ ಬ್ರಾಂಡ್ ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿದೆ. ಇದರ ಬೆನ್ನಲ್ಲೇ ಮೊಟ್ಟೆ ಸೇವಿಸುವವರಲ್ಲಿ ಆತಂಕ ಮೂಡಿದ್ದು, ರಾಜ್ಯಾದಂತ ಈ ವಿಚಾರ ಚರ್ಚೆಗೆ ಕಾರಣವಾಗುತ್ತಿದ್ದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಸೋಮವಾರದಿಂದ ಮಾಹಿತಿ ಕಲೆ ಹಾಕಲು ಕ್ರಮ ಕೈಗೊಂಡಿದೆ.

