ಜ್ಯೂಸ್ ಮಾದರಿಯ ‘BuzzBallz’ ತಂಪು ಪಾನೀಯದಲ್ಲಿ ವಿಷಕಾರಿ ಅಂಶ ಪತ್ತೆ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ಸಂಬಂಧಿಸಿದ ಅಧಿಕಾರಿಗಳಲ್ಲಿ ಸ್ಯಾಂಪಲ್ ಸಂಗ್ರಹಿಸಲು ಸೂಚಿಸುತ್ತೇನೆ. ಗುಣಮಟ್ಟದ ಪರೀಕ್ಷೆಯ ವರದಿ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.
ತಂಪುಪಾನೀಯಗಳಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಅಲ್ಲದೇ ಔಷಧ ನಿಯಂತ್ರಣ ಇಲಾಖೆಗೆ ಪತ್ರ ಬರೆದಿದೆ. ತಂಪುಪಾನೀಯಗಳಲ್ಲಿ ವಿಷಕಾರಿ ಅಂಶಗಳ ಇರುವಿಕೆ ಮಕ್ಕಳ ಆರೋಗ್ಯಕ್ಕೆ ಹಾನಿಕರವಾಗಬಹುದು ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಔಷಧ ನಿಯಂತ್ರಣ ಇಲಾಖೆಗೆ ಮನವಿ ಮಾಡಿದೆ. ಮಕ್ಕಳ ಆರೋಗ್ಯದ ರಕ್ಷಣೆಗಾಗಿ ಈ ತನಿಖೆ ಅನಿವಾರ್ಯವಾಗಿದೆ ಎಂದು ಆಯೋಗ ತಿಳಿಸಿದೆ. ತಂಪುಪಾನೀಯಗಳ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಇಲಾಖೆಯು ಸೂಕ್ತ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ಜ್ಯೂಸ್ ಮಾದರಿಯ ‘Buzz Ballz’ ತಂಪು ಪಾನೀಯದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ. ಈ ತಂಪು ಪಾನೀಯದಲ್ಲಿ ಅಧಿಕ ಸಕ್ಕರೆ ಮಟ್ಟ ಇದ್ದು, ಶೇಕಡ 15ರಷ್ಟು ಆಲ್ಕೋಹಾಲ್ ಅಂಶ ಇದೆ ಎಂದು ತಿಳಿದುಬಂದಿದೆ.
ಟಿನ್ ರೂಪದಲ್ಲಿ ಈ ಡ್ರಿಂಕ್ಸ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಶಾಲಾ ಕಾಲೇಜಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಾಗಿ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಯನ್ನು ಆಧರಿಸಿ ಮಕ್ಕಳ ಆಯೋಗದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಔಷಧ ನಿಯಂತ್ರಣ ಇಲಾಖೆಗೆ ಪತ್ರ ಬರೆದಿದ್ದು, ಮುಕ್ತವಾಗಿ ಮಾರಾಟ ಮಾಡಲು ಅವಕಾಶ ನೀಡದಂತೆ ತಿಳಿಸಿದೆ.

