ಉತ್ತರ ಪ್ರದೇಶ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ರಕ್ಷಿಸಲು ಹೊರಟ ಪೊಲೀಸ್ ಅಧಿಕಾರಿಯೊಬ್ಬರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬಹ್ರೈಚ್‌ನ ಖೈರಿಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ಥಾಲಿಯಾ ಗ್ರಾಮದ ಬಳಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಘಟನೆಯ ಹಿನ್ನೆಲೆ:
ಶುಕ್ರವಾರ ಮಧ್ಯಾಹ್ನ ಗಸ್ತು ತಿರುಗುತ್ತಿದ್ದ ಇನ್ಸ್‌ಪೆಕ್ಟರ್ ಪ್ರದೀಪ್ ಕುಮಾರ್ ಸಿಂಗ್ ಅವರಿಗೆ ರಸ್ತೆ ಬದಿಯಲ್ಲಿ ಗಾಯಗೊಂಡು ಬಿದ್ದಿದ್ದ 55 ವರ್ಷದ ಗಾಯತ್ರಿ ದೇವಿ ಎಂಬ ಮಹಿಳೆ ಕಾಣಿಸಿಕೊಂಡಿದ್ದಾರೆ. ಅವರು ಅಪರಿಚಿತ ವಾಹನ ಡಿಕ್ಕಿಯಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರು ಎಂದು ತಿಳಿದುಬಂದಿದೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಇನ್ಸ್‌ಪೆಕ್ಟರ್ ಪ್ರದೀಪ್ ಕುಮಾರ್ ಸಿಂಗ್, ಮಹಿಳೆಯನ್ನು ತಮ್ಮ ಕೈಗಳಲ್ಲಿ ಎತ್ತಿಕೊಂಡು ಸಮೀಪದ ವೈದ್ಯರಾದ ಶಿವಶರಣ್ ಸಿಂಗ್ ಅವರ ಬಳಿಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಸ್ಥಳೀಯ ನಿವಾಸಿಗಳು ಅಧಿಕಾರಿಯ ಈ ಸಕಾಲಿಕ ನೆರವನ್ನು ಆರಂಭದಲ್ಲಿ ಪ್ರಶಂಸಿದ್ದರು.
https://x.com/ShrutiDhore/status/2093621814836740118
ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಇನ್ಸ್‌ಪೆಕ್ಟರ್ ಪ್ರದೀಪ್ ಕುಮಾರ್ ಸಿಂಗ್, “ಗಸ್ತು ತಿರುಗುವಾಗ ಗಾಯಗೊಂಡಿದ್ದ ಮಹಿಳೆ ಕಂಡುಬಂದ ತಕ್ಷಣ ಅವರನ್ನು ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಅಪರಿಚಿತ ವಾಹನವನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ನೆಟಿಜನ್ನರಿಂದ ತೀವ್ರ ಆಕ್ರೋಶ
ಇನ್ಸ್‌ಪೆಕ್ಟರ್ ಮಹಿಳೆಯನ್ನು ಎತ್ತಿಕೊಂಡು ಓಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟಿಜನ್ನರು ತೀವ್ರವಾಗಿ ಟೀಕಿಸಲು ಶುರುಮಾಡಿದ್ದಾರೆ. ಅಧಿಕಾರಿಯ ಪಕ್ಕದಲ್ಲೇ ಖಾಲಿ ಪೊಲೀಸ್ ಜೀಪ್ ಬರುತ್ತಿದ್ದರೂ, ವಾಹನ ಬಳಸದೆ ಮಹಿಳೆಯನ್ನು ಎತ್ತಿಕೊಂಡು ಓಡಿದ್ದು ಏಕೆ ಎಂದು ನೆಟಿಜನ್ನರು ಪ್ರಶ್ನಿಸಿದ್ದಾರೆ:
ಸೋಶಿಯಲ್ ಮೀಡಿಯಾದಲ್ಲಿ ನೆಟಿಜನ್‌ಗಳ ರಿಯಾಕ್ಷನ್‌ಗಳು:
ಫಾಲೋವರ್ಸ್‌ಗಾಗಿ ಪಿಆರ್ ಸ್ಟಂಟಾ?: “ಇದು ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಮಾಡಿದ ಪಿಆರ್ (PR) ಈವೆಂಟ್ ಎನಿಸುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಪ್ರತಿ ಕ್ಷಣವೂ ಜೀವ ಉಳಿಸಲು ಮುಖ್ಯ. ಪಕ್ಕದಲ್ಲೇ ಪೊಲೀಸ್ ಜೀಪ್ ಇದ್ದರೂ ಆಸ್ಪತ್ರೆಗೆ ಕರೆದೊಯ್ಯಲು ಅದನ್ನು ಬಳಸದೆ ಕ್ಯಾಮೆರಾಗಾಗಿ ಈ ರೀತಿ ಮಾಡಿದ್ದು ಸರಿಯಲ್ಲ. ಮೊದಲು ಜೀವ ಉಳಿಸಿ, ಪಿಆರ್ ಆಮೇಲೆ ಮಾಡಿ” ಎಂದು ನೆಟಿಜನ್ ಒಬ್ಬರು ಕಿಡಿಕಾರಿದ್ದಾರೆ.
ಕಾರ್‌ನಲ್ಲೇ ವೇಗವಾಗಿ ಹೋಗಬಹುದಿತ್ತಲ್ಲವೇ?: “ಅಧಿಕಾರಿ ನೆರವು ನೀಡಿದ್ದಕ್ಕೆ ಮೆಚ್ಚುಗೆಯಿದೆ, ಆದರೆ ಖಾಲಿ ಪೊಲೀಸ್ ವಾಹನ ಹಿಂದೆ ಬರುತ್ತಿದ್ದಾಗ ಅದರಲ್ಲಿ ಏರಿಸಿ ಕರೆದೊಯ್ಯಿದ್ದರೆ ಬೇಗ ಆಸ್ಪತ್ರೆ ತಲುಪಬಹುದಿತ್ತಲ್ಲವೇ?” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸಿಂಗಮ್ ಶೈಲಿಯ ಪೋಸ್?: “ಹಿಂದೆ ಖಾಲಿ ಜೀಪ್ ಬರುತ್ತಿದೆ, ಆದರೆ ಸಬ್ ಇನ್ಸ್‌ಪೆಕ್ಟರ್ ಮಹಿಳೆಯನ್ನು ಕೈಯಲ್ಲಿ ಎತ್ತಿಕೊಂಡು ಆಸ್ಪತ್ರೆಗೆ ಓಡುತ್ತಿದ್ದಾರೆ ಕಾರ್‌ನಲ್ಲಿ ಹೋಗಿದ್ದರೆ ಬೇಗ ತಲುಪುತ್ತಿದ್ದರು, ಆದರೆ ಹಾಗೆ ಮಾಡಿದರೆ ‘ಸಿಂಗಮ್ ಶೈಲಿಯ ಪೋಸ್’ ಕ್ಯಾಮೆರಾದಲ್ಲಿ ಹೇಗೆ ಸೆರೆಯಾಗುತ್ತಿತ್ತು?” ಎಂದು ನೆಟಿಜನ್‌ಗಳು ವ್ಯಂಗ್ಯವಾಡಿದ್ದಾರೆ.

