ಸಿರುಗುಪ್ಪ: ಜಮೀನು ವಿವಾದದ ಹಿನ್ನೆಲೆಯಲ್ಲಿ ಭೂಮಾಲೀಕನೊಬ್ಬ ಜೆಸಿಬಿ ಮೂಲಕ ಸಾರ್ವಜನಿಕ ರಸ್ತೆಯನ್ನೇ ಅಗೆದು ಹಾಕಿರುವ ಅಮಾನವೀಯ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಗ್ಗೂರು ಗ್ರಾಮದಲ್ಲಿ ನಡೆದಿದೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಆಂಬುಲೆನ್ಸ್ ಬರಲು ಸಾಧ್ಯವಾಗದೆ, ಅನಾರೋಗ್ಯಕ್ಕೀಡಾದ ಬಾಲಕಿಯನ್ನು ಗ್ರಾಮಸ್ಥರೇ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸಿದ್ದಾರೆ.
ಘಟನೆಯ ಹಿನ್ನೆಲೆ
ಬಗ್ಗೂರು ಗ್ರಾಮದಲ್ಲಿ ಸಾರ್ವಜನಿಕರು ಓಡಾಡುವ ತಾತ್ಕಾಲಿಕ ರಸ್ತೆಯು ಓರ್ವ ವ್ಯಕ್ತಿಯ ಸ್ವಂತ ಜಾಗದಲ್ಲಿದೆ ಎನ್ನಲಾಗಿದೆ. ಈ ದಾರಿಯ ವಿಚಾರವಾಗಿ ಕಳೆದ 4 ವರ್ಷಗಳಿಂದ ಗ್ರಾಮಸ್ಥರು ಮತ್ತು ಜಮೀನು ಮಾಲೀಕನ ನಡುವೆ ತಿಕ್ಕಾಟ ನಡೆಯುತ್ತಿತ್ತು. ಹಿಂದೆ ಜನರು ಓಡಾಡದಂತೆ ತಡೆಯಲು ಮಾಲೀಕನು ದಾರಿಯ ಮೇಲೆ ಚರಂಡಿ ನೀರು ಬಿಟ್ಟು ತೊಂದರೆ ನೀಡುತ್ತಿದ್ದ ಎನ್ನಲಾಗಿದೆ.
ತಹಶೀಲ್ದಾರ್ ಮಧ್ಯಸ್ಥಿಕೆ ಮತ್ತು ಉಲ್ಲಂಘನೆ:
ಮೂರು ತಿಂಗಳ ಹಿಂದೆ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ, “ಸಾರ್ವಜನಿಕರಿಗೆ ತೊಂದರೆ ನೀಡಬೇಡಿ, ಪರ್ಯಾಯ ವ್ಯವಸ್ಥೆಯಾಗುವವರೆಗೆ ದಾರಿಗೆ ಅವಕಾಶ ನೀಡಿ” ಎಂದು ಮಾಲೀಕನ ಮನವೊಲಿಸಿದ್ದರು. ಆದರೆ, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ನಂತರ ತಡೆಯಾಜ್ಞೆ ಸಿಕ್ಕಿದ್ದರೂ, ಅದನ್ನು ಲೆಕ್ಕಿಸದ ಮಾಲೀಕ ಶುಕ್ರವಾರ ಬೆಳಿಗ್ಗೆ 2 ಜೆಸಿಬಿಗಳನ್ನು ತರಿಸಿ ರಸ್ತೆಯನ್ನು ಅಗೆದು ಹಾಕಿದ್ದಾನೆ.
ಬಾಲಕಿಯ ಜೀವನ್ಮರಣ ಹೋರಾಟ:
ಇದೇ ಸಮಯದಲ್ಲಿ ಗ್ರಾಮದ ಬಾಲಕಿಯೊಬ್ಬಳು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಕರೆಸಿದರೂ, ರಸ್ತೆ ಅಗೆದಿದ್ದರಿಂದ ವಾಹನ ಗ್ರಾಮದೊಳಗೆ ಬರಲು ಸಾಧ್ಯವಾಗಲಿಲ್ಲ. ಅನಿವಾರ್ಯವಾಗಿ ಗ್ರಾಮಸ್ಥರು ಬಾಲಕಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಅಗೆದ ರಸ್ತೆಯಲ್ಲೇ ನಡೆದು ಆಂಬುಲೆನ್ಸ್ ತಲುಪಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಪೊಲೀಸ್ ಕ್ರಮ:
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ರಸ್ತೆ ಅಗೆಯುವುದನ್ನು ತಡೆದಿದ್ದಲ್ಲದೆ, ಕೃತ್ಯಕ್ಕೆ ಬಳಸಿದ್ದ ಜೆಸಿಬಿಯನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದಿದ್ದಾರೆ. ರೋಗಿಯ ಪ್ರಾಣದ ಜೊತೆ ಚೆಲ್ಲಾಟವಾಡಿದ ಭೂಮಾಲೀಕನ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

