ಮಧ್ಯಪ್ರದೇಶದ ಇಂದೋರ್ನ ಕೃಷ್ಣ ವಿಹಾರ್ ಕಾಲೋನಿಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಹದಿನೈದು ವರ್ಷದ ಬಾಲಕನೊಬ್ಬ ಆಧ್ಯಾತ್ಮದ ಸೆಳೆತಕ್ಕೆ ಒಳಗಾಗಿ, ತನ್ನ ಕುಟುಂಬಕ್ಕೆ ಪತ್ರವೊಂದನ್ನು ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿದ್ದಾನೆ. ಧಾರ್ಮಿಕ ಪ್ರವಚನಕಾರ ಪ್ರೇಮಾನಂದ್ ಮಹಾರಾಜ್ ಅವರ ಬೋಧನೆಗಳಿಂದ ಪ್ರಭಾವಿತನಾಗಿ ತಾನು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಆತ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.
ಭಾವನಾತ್ಮಕ ಪತ್ರ ಮತ್ತು ‘ನಿಜವಾದ ಕುಟುಂಬ’
ಮಂಗಳವಾರ ಮಧ್ಯಾಹ್ನ ಮನೆಯಿಂದ ಹೊರಬಂದ ಬಾಲಕ ಸಂಜೆಯಾದರೂ ಹಿಂತಿರುಗಿರಲಿಲ್ಲ. ಆತನಿಗಾಗಿ ಹುಡುಕಾಟ ನಡೆಸಿದ ಪೋಷಕರಿಗೆ ಆತನ ಕೋಣೆಯಲ್ಲಿ ಒಂದು ಪತ್ರ ಸಿಕ್ಕಿದೆ. “ಅಮ್ಮ, ಅಪ್ಪ, ಅಣ್ಣ ಮತ್ತು ತಾತ.. ನಾನು ಇಂದು ನನ್ನ ನಿಜವಾದ ಕುಟುಂಬವನ್ನು ಸೇರಲು ಹೋಗುತ್ತಿದ್ದೇನೆ. ದಯವಿಟ್ಟು ಅಳಬೇಡಿ ಮತ್ತು ನನ್ನನ್ನು ಹುಡುಕಲು ಪ್ರಯತ್ನಿಸಬೇಡಿ. ನಾನು ಇನ್ನು ಮುಂದೆ ನನ್ನ ನಿಜವಾದ ಪೋಷಕರೊಂದಿಗೆ ವಾಸಿಸುತ್ತೇನೆ,” ಎಂದು ಆತ ಪತ್ರದಲ್ಲಿ ಬರೆದಿದ್ದಾನೆ.
ಪರೀಕ್ಷೆಯ ಒತ್ತಡವಲ್ಲ, ಇದು ಆಧ್ಯಾತ್ಮದ ಹಾದಿ!
ಸಾಮಾನ್ಯವಾಗಿ ಮಕ್ಕಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ಅಥವಾ ಪೋಷಕರು ಬೈದಾಗ ಮನೆ ಬಿಡುವುದುಂಟು. ಆದರೆ ಈ ಬಾಲಕ ಪತ್ರದಲ್ಲಿ ಅಂತಹ ಯಾವುದೇ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. “ನನ್ನ ವಾಸ್ತವವೇನು ಎಂಬುದು ನನಗೆ ಅರಿವಾಗಿದೆ. ಆ ವಾಸ್ತವ ಏನೆಂದು ತಿಳಿಯಬೇಕಾದರೆ ನನ್ನ ಫೋಟೋ ನೋಡಿ, ಅಲ್ಲಿ ಪ್ರೇಮಾನಂದ್ ಮಹಾರಾಜ್ ಅವರ ಮಾತುಗಳನ್ನು ಬರೆಯಲಾಗಿದೆ,” ಎಂದು ತಿಳಿಸಿದ್ದಾನೆ. ಅಲ್ಲದೆ, ತಾನು ತಾಯಿಯ ಡಬ್ಬಿಯಿಂದ 500 ರೂಪಾಯಿ ತೆಗೆದುಕೊಂಡಿರುವುದಾಗಿ ಮತ್ತು ಅದನ್ನು ತನ್ನ ಸ್ನೇಹಿತನೊಬ್ಬ ಹಿಂತಿರುಗಿಸುತ್ತಾನೆ ಎಂದು ಬರೆದಿರುವುದು ಎಲ್ಲರನ್ನೂ ಭಾವುಕರನ್ನಾಗಿಸಿದೆ.
ಪೊಲೀಸ್ ತನಿಖೆ ಮತ್ತು ವೃಂದಾವನಕ್ಕೆ ಶೋಧ
ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಖಜರಾನಾ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನು ಪ್ರೇಮಾನಂದ್ ಮಹಾರಾಜ್ ಅವರ ಆಶ್ರಮವಿರುವ ವೃಂದಾವನದ ಕಡೆಗೆ ಹೋಗಿರುವ ಸಾಧ್ಯತೆ ಇರುವುದರಿಂದ, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಸಾರಿಗೆ ಮಾರ್ಗಗಳನ್ನು ತಪಾಸಣೆ ನಡೆಸುತ್ತಿದ್ದಾರೆ.

