ಬೆಂಗಳೂರು: ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅವಾಂತರ ಸೃಷ್ಟಿಸಿ ಎರಡು ಬಾರಿ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಘಟನೆ ನಡೆದಿದೆ.
ಬೆಂಗಳೂರಿನಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕನೊಬ್ಬ ಎರಡು ಬಾರಿ ಎಮರ್ಜೆನ್ಸಿ ಎಕ್ಸಿಟ್ ಡೋರ್ ತೆರೆಯಲು ಯತ್ನಿಸಿದ್ದಾನೆ. ಒಮ್ಮೆ ವಿಮಾನ ಸಿಬ್ಬಂದಿ ಕೇಳಿದಾಗ ತಿಳೀಲಿಲ್ಲ ಎಂದಿದ್ದಾನೆ. ಮತ್ತೊಮ್ಮೆ ಮೈಮೇಲೆ ದೆವ್ವ ಬಂದಿತ್ತು ಎಂದು ಹೇಳಿದ್ದಾನೆ ಪ್ರಯಾಣಿಕನ ವರ್ತನೆ ಆತಂಕ್ಕೆ ಕಾರಣವಾಗಿತ್ತು.
6E-185 ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಹಾರಾಟದ ಸಮಯದಲ್ಲಿ ಎರಡು ಬಾರಿ ತುರ್ತು ನಿರ್ಗಮನದ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ, ಪ್ರಯಾಣಿಕನನ್ನು ಭದ್ರತಾ ಸಂಸ್ಥೆಗಳಿಗೆ ಹಸ್ತಾಂತರಿಸಲಾಯಿತು. ಆತನನ್ನು ಅದ್ನಾನ್ ಎಂದು ಗುರುತಿಸಲಾಗಿದೆ.
ವಿಮಾನ ಟೇಕ್ ಆಫ್ ಆದ ಸುಮಾರು 15 ನಿಮಿಷಗಳ ನಂತರ ಅದ್ನಾನ್ ಮೊದಲು ತುರ್ತು ಬಾಗಿಲನ್ನು ತಿದ್ದಲು ಪ್ರಯತ್ನಿಸಿದ್ದ. ಕ್ಯಾಬಿನ್ ಸಿಬ್ಬಂದಿ ತಕ್ಷಣ ಅವನನ್ನು ತಡೆದು ಎಚ್ಚರಿಸಿದ್ದರು, ನಂತರ ಅವನು ಸ್ವಲ್ಪ ಸಮಯದವರೆಗೆ ಶಾಂತನಾಗಿದ್ದ. ಆದರೆ ರಾತ್ರಿ 10.20 ರ ಸುಮಾರಿಗೆ, ವಿಮಾನವು ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತು ಸುಮಾರು 500 ಅಡಿ ಎತ್ತರದಲ್ಲಿ ಇಳಿಯುವ ಹಂತದಲ್ಲಿದ್ದಾಗ ಅದ್ನಾನ್ ಮತ್ತೆ ಎಕ್ಸಿಟ್ ಡೋರ್ ತೆರೆಯಲು ಪ್ರಯತ್ನಿಸಿದ್ದಾನೆ. ಸಿಬ್ಬಂದಿಯಿಂದ ಮಾಹಿತಿ ಪಡೆದ ನಂತರ, ಪೈಲಟ್ ಲ್ಯಾಂಡಿಂಗ್ ಅನ್ನು ಸ್ಥಗಿತಗೊಳಿಸಿದರು, ಸುತ್ತಾಟ ನಡೆಸಿದರು ಮತ್ತು ಬೆಳಗ್ಗೆ 10. 35 ಕ್ಕೆ ವಿಮಾನವನ್ನು ಮತ್ತೆ ಸುರಕ್ಷಿತವಾಗಿ ಇಳಿಸಿದ್ದಾರೆ.
ಪ್ರಯಾಣಿಕನ ಹುಚ್ಚಾಟ ವಿಮಾನದಲ್ಲಿದ್ದ ಇತರ ಪ್ರಯಾಣಿಕರಲ್ಲಿ ಭಯವನ್ನುಂಟು ಮಾಡಿತ್ತು. ಸದ್ಯ ಎಲ್ಲರೂ ಸುರಕ್ಷಿತವಾಗಿ ಇಳಿದಿದ್ದಾರೆ.
ಪ್ರಯಾಣಿಕ ಅದ್ನಾನ್ ನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ ಭದ್ರತಾ ಸಂಸ್ಥೆಗಳಿಗೆ ಹಸ್ತಾಂತರಿಸಲಾಯಿತು. ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ನಡೆಸಿದ ವಿಚಾರಣೆಯ ಸಮಯದಲ್ಲಿ, ಅದ್ನಾನ್ ಆರಂಭದಲ್ಲಿ ತಾನು ಏಕೆ ಹಾಗೆ ವರ್ತಿಸಿದೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾನೆ, ಬಳಿಕ ನನಗೆ ದೆವ್ವ ಹಿಡಿದಿದೆ ಎಂದಿದ್ದಾನೆ.
ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ, ತಾನು ಗೋವಾದಲ್ಲಿ ರಜೆ ಮುಗಿಸಿ ಹಿಂತಿರುಗುತ್ತಿದ್ದೇನೆ.ತಾನು ಎಳೆದ ಹ್ಯಾಂಡಲ್ ತುರ್ತು ನಿರ್ಗಮನ ಬಾಗಿಲಿನದ್ದು ಎಂದು ತಿಳಿದಿರಲಿಲ್ಲ ಎಂದಿದ್ದಾರೆ. ಪ್ರಯಾಣಿಕ ಒಮ್ಮೊಮ್ಮೆ ಒಂದೊಂದು ಹೇಳಿಕೆ ನೀಡುತ್ತಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

