ಅಂಚೆ ಇಲಾಖೆಯ ಪಾರ್ಸೆಲ್ ಬುಕ್ಕಿಂಗ್ ಸೇವೆ ಬಳಕೆ ಮಾಡುವ ಜನರಿಗೆ ಮಹತ್ವದ ಅಪ್ಡೇಟ್ ಇದೆ. ಭಾರತೀಯ ಅಂಚೆ ಇಲಾಖೆ ಸಾರ್ವಜನಿಕರ ಸೇವೆಯನ್ನು ಮತ್ತಷ್ಟು ಸ್ನೇಹಿಯಾಗಿಸಲು ಪಾರ್ಸೆಲ್ ಬುಕ್ಕಿಂಗ್ ಸೌಲಭ್ಯದ ಸಮಯವನ್ನು ವಿಸ್ತರಣೆ ಮಾಡಿದೆ.
ಅಂಚೆ ಕಚೇರಿ ಮುಚ್ಚುವ ಸಮಯದ 30 ನಿಮಿಷಗಳ ಮುಂಚೆ ಸಹ ಪತ್ರಗಳು, ಪಾರ್ಸೆಲ್ಗಳು ಹಾಗೂ ಅಂತರರಾಷ್ಟ್ರೀಯ ಪತ್ರಗಳು ಮತ್ತು ಪಾರ್ಸೆಲ್ಗಳ ಬುಕ್ಕಿಂಗ್ ಸೌಲಭ್ಯವನ್ನು ವಿಸ್ತರಿಸಲಾಗಿದ್ದು, ಜನರು ಈ ಸೇವೆಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದೆ.
ಸ್ಪೀಡ್ ಪೋಸ್ಟ್ ಮತ್ತು ಇತರ ಪತ್ರ ಹಾಗೂ ಪಾರ್ಸೆಲ್ಗಳ ಬುಕ್ಕಿಂಗ್ ಅವಧಿ ವಿಸ್ತರಣೆ ಮಾಡಿದ್ದು, ಎಲ್ಲಾ ಇಲಾಖಾ ಅಂಚೆ ಕಚೇರಿಗಳಲ್ಲಿ ಕಚೇರಿ ಕಾರ್ಯ ಸಮಯ ಮುಕ್ತಾಯವಾಗುವ ಮೊದಲು ಕೊನೆಯ 30 ನಿಮಿಷಗಳವರೆಗೆ ಅಂಚೆ ವಸ್ತುಗಳನ್ನು ಬುಕ್ ಮಾಡುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಈ ವ್ಯವಸ್ಥೆಯಡಿ ಕಚೇರಿ ಅವಧಿಯಲ್ಲಿ ಅಂಚೆ ಕಚೇರಿಗಳ ನಿಗದಿತ ಕಾರ್ಯಾವಧಿ ಮುಕ್ತಾಯಕ್ಕೆ ಮುಂಚಿತವಾಗಿ 30 ನಿಮಿಷಗಳವರೆಗೆ ಸ್ಪೀಡ್ ಪೋಸ್ಟ್, ಪಾರ್ಸೆಲ್ ಹಾಗೂ ಅಂತರರಾಷ್ಟ್ರೀಯ ಸ್ಪೀಡ್ಪೋಸ್ಟ್, ಪಾರ್ಸೆಲ್ಗಳನ್ನು ಬುಕ್ ಮಾಡಬಹುದಾಗಿದೆ. ಇದರಿಂದ ಕಚೇರಿ ಸಮಯದ ಅಂತ್ಯದಲ್ಲಿ ಅಂಚೆ ಕಚೇರಿಗೆ ಬರುವ ಗ್ರಾಹಕರಿಗೂ ತಮ್ಮ ಅಂಚೆ ವಸ್ತುಗಳನ್ನು ಸುಲಭವಾಗಿ ಬುಕ್ ಮಾಡುವ ಅವಕಾಶ ದೊರೆಯುತ್ತದೆ.
ಮನೆಯಿಂದಲೇ ಬುಕ್ ಮಾಡಿ: ಮನೆಯಲ್ಲಿಯೇ ಕುಳಿತು ಪತ್ರ, ಪಾರ್ಸೆಲ್ಗಳ ಬುಕ್ಕಿಂಗ್ ಸೌಲಭ್ಯ (Customer Self Service Portal) ಒದಗಿಸಲಾಗಿದೆ. ಸಾರ್ವಜನಿಕರ ಸೌಕರ್ಯಕ್ಕಾಗಿ ಭಾರತೀಯ ಅಂಚೆ ಇಲಾಖೆಯ ಗ್ರಾಹಕ ಸ್ವಯಂ ಸೇವಾ ಪೋರ್ಟಲ್ https://app.indiapost.gov.in/customer-selfservice/login) ಲಭ್ಯವಿದ್ದು, ಇದರ ಮೂಲಕ ಅಂಚೆ ವಸ್ತುಗಳ ಬುಕ್ಕಿಂಗ್, ಟ್ರ್ಯಾಕಿಂಗ್, ದೂರು ಸಲ್ಲಿಕೆ, ಸೇವೆಗಳ ವಿವರಗಳು ಹಾಗೂ ಇತರ ಅನೇಕ ಸೇವೆಗಳನ್ನು ಆನ್ಲೈನ್ನಲ್ಲಿಯೇ ಪಡೆಯಬಹುದು. ಸಾರ್ವಜನಿಕರು ಈ ಡಿಜಿಟಲ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದೆ.
ಮೊಬೈಲ್ ಅಪ್ಲಿಕೇಶನ್: ತನ್ನ 3ನೇ ಜನಸ್ನೇಹಿ ಕಾರ್ಯದ ಭಾಗವಾಗಿ ಭಾರತೀಯ ಅಂಚೆ ಇಲಾಖೆ ಡಾಕ್ ಸೇವಾ ಆ್ಯಪ್ (DAK SEVA APP) ಬಿಡುಗಡೆ ಮಾಡಿದೆ. ಅಂಚೆ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ಪಡೆಯುವ ಉದ್ದೇಶದಿಂದ ಭಾರತೀಯ ಅಂಚೆ ಇಲಾಖೆ ಇದನ್ನು ಅಭಿವೃದ್ಧಿಗೊಳಿಸಿದೆ.
ಈ ಮೊಬೈಲ್ ಆ್ಯಪ್ ಮೂಲಕ ಅಂಚೆ ವಸ್ತುಗಳ ಬುಕ್ಕಿಂಗ್, ಟ್ರ್ಯಾಕಿಂಗ್, ದೂರು ನೋಂದಣಿ, ಸೇವಾ ಮಾಹಿತಿ ಸೇರಿದಂತೆ ವಿವಿಧ ಗ್ರಾಹಕ ಸೇವೆಗಳು ಮೊಬೈಲ್ನಲ್ಲಿಯೇ ಲಭ್ಯವಿರುತ್ತವೆ ಮತ್ತು ಸಾರ್ವಜನಿಕರು ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಬಳಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಡೌನ್ಲೋಡ್ ಮಾಡಲು ಅಗತ್ಯವಾದ QR code, India Post ಇಲಾಖೆಯ ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ. ಸಾರ್ವಜನಿಕರು ಈ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು.

