ಜರ್ಮನಿಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಯುವತಿಯೊಬ್ಬರು ತಮ್ಮ ಮೊದಲ ಸಂಬಳದಲ್ಲಿ ತಂಗಿಗೆ ನೀಡಿದ ಉಡುಗೊರೆಯ ಕಥೆ ಈಗ ಇಂಟರ್ನೆಟ್‌ನಲ್ಲಿ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ರಿಯಾ ಹೆಸರಿನ ಈ ಯುವತಿ, ವಿದೇಶಕ್ಕೆ ಹೋದ ಮೇಲೆ ತಾನು ಮಾಡಿದ ಮೊದಲ ಸಂಪಾದನೆಯನ್ನು ತನ್ನ ಆಸೆಗಳಿಗಾಗಿ ಬಳಸುವ ಬದಲು, ವರ್ಷಗಳ ಹಿಂದೆ ತಂಗಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ಬಳಸಿದ್ದಾರೆ.
1,700 ಯೂರೋ ಸಂಬಳ ಮತ್ತು ಅಕ್ಕನ ಪ್ರೀತಿ
ರಿಯಾ ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಈ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. “ನಾನು ಜರ್ಮನಿಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನರ್ಸ್. ನನ್ನ ಮೊದಲ ಸಂಬಳ 1,700 ಯೂರೋಗಳು (ಸುಮಾರು 1.5 ಲಕ್ಷ ರೂಪಾಯಿಗೂ ಅಧಿಕ). ಆ ಹಣದಿಂದ ನಾನು ನನಗಾಗಿ ಏನನ್ನೂ ಖರೀದಿಸಲಿಲ್ಲ. ಬದಲಾಗಿ ನನ್ನ ತಂಗಿಗೆ ಐಫೋನ್ 16 ಕೊಡಿಸಿದೆ. ಅದನ್ನು ನೋಡಿದಾಗ ಆಕೆ ಆನಂದದಿಂದ ಕಣ್ಣೀರಿಟ್ಟಳು. ನನ್ನ ಮೊದಲ ಸಂಬಳ ನಿನಗೆ ಎಂದು ವರ್ಷಗಳ ಹಿಂದೆಯೇ ಅವಳಿಗೆ ಮಾತು ಕೊಟ್ಟಿದ್ದೆ. ಜರ್ಮನಿ ಆ ಮಾತನ್ನು ಉಳಿಸಿಕೊಳ್ಳಲು ನನಗೆ ನೆರವಾಯಿತು” ಎಂದು ಭಾವುಕರಾಗಿ ಹೇಳಿದ್ದಾರೆ.
ತಂದೆಗೆ ಕಾರು, ಕುಟುಂಬಕ್ಕೆ ಮೊದಲ ಆದ್ಯತೆ
ಕೇವಲ ತಂಗಿಗೆ ಫೋನ್ ಕೊಡಿಸುವುದು ಮಾತ್ರವಲ್ಲದೆ, ನಂತರದ ದಿನಗಳಲ್ಲಿ ಹಣ ಉಳಿತಾಯ ಮಾಡಿ ರಿಯಾ ತಮ್ಮ ತಂದೆಗೆ ಕಾರನ್ನು ಕೂಡ ಕೊಡಿಸಿದ್ದಾರೆ. “ನಾನು ವಿದೇಶಕ್ಕೆ ಬಂದ ಉದ್ದೇಶವೇ ಇದಾಗಿತ್ತು. ನಿಮ್ಮ ಜರ್ಮನಿಯ ಮೊದಲ ಸಂಬಳವನ್ನು ನೀವು ಏನು ಮಾಡುತ್ತೀರಿ?” ಎಂದು ಅವರು ನೆಟ್ಟಿಗರನ್ನು ಪ್ರಶ್ನಿಸಿದ್ದಾರೆ. ಕುಟುಂಬಕ್ಕಾಗಿ ತನ್ನ ವೈಯಕ್ತಿಕ ಸುಖವನ್ನು ತ್ಯಾಗ ಮಾಡಿದ ರಿಯಾ ಅವರ ಈ ನಡೆಯನ್ನು ಕಂಡ ಜನರು “ಇದೇ ನಿಜವಾದ ಯಶಸ್ಸು” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರ ಮೆಚ್ಚುಗೆಯ ಮಹಾಪೂರ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾವಿರಾರು ಜನರು ಕಾಮೆಂಟ್ ಮೂಲಕ ರಿಯಾ ಅವರಿಗೆ ಶುಭ ಹಾರೈಸಿದ್ದಾರೆ. “ಇದು ಅತ್ಯಂತ ಪವಿತ್ರವಾದ ಪ್ರೀತಿ. ಸಾಧನೆ ಮಾಡಿದ ನಂತರ ಕೊಟ್ಟ ಮಾತನ್ನು ನೆನಪಿಟ್ಟುಕೊಳ್ಳುವವರು ಬಹಳ ಕಡಿಮೆ” ಎಂದು ಒಬ್ಬರು ಬರೆದರೆ, “ನಿಮ್ಮ ತಂಗಿಗೆ ನಿಮ್ಮ ಬಗ್ಗೆ ಹೆಮ್ಮೆ ಇರಬೇಕು, ನನ್ನ ಕಣ್ಣಲ್ಲೂ ನೀರು ಬಂತು” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮಧ್ಯಮ ವರ್ಗದ ಕುಟುಂಬದ ಕನಸುಗಳು ಮತ್ತು ವಿದೇಶಕ್ಕೆ ಹೋಗುವವರ ಹಿಂದಿನ ಶ್ರಮಕ್ಕೆ ಈ ಕಥೆ ಕನ್ನಡಿ ಹಿಡಿದಿದೆ.

