ಸಾಮಾಜಿಕ ಜಾಲತಾಣದ ಮೂಲಕ ಮಕ್ಕಳನ್ನು ವಂಚಿಸಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಹಾಗೂ ಬ್ಲ್ಯಾಕ್ಮೇಲ್ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ಸಾಯಿ ಕುಮಾರ್ ಕುರೆಮುಲಾ (31) ಎಂಬಾತನನ್ನು ಅಮೆರಿಕದಲ್ಲಿ 35 ವರ್ಷಗಳ ಕಾಲ ಜೈಲಿಗೆ ಹಾಕಲಾಗಿದೆ. ವಲಸೆ ವೀಸಾದ ಮೇಲೆ ಒಕ್ಲಹೋಮಾದ ಎಡ್ಮಂಡ್ನಲ್ಲಿ ವಾಸಿಸುತ್ತಿದ್ದ ಈತ, ಆನ್ಲೈನ್ನಲ್ಲಿ ಹದಿಹರೆಯದವನಂತೆ ನಟಿಸಿ ಯುವತಿಯರೊಂದಿಗೆ ಸ್ನೇಹ ಬೆಳೆಸುತ್ತಿದ್ದ. ನಂತರ ಅವರನ್ನು ತನ್ನ ಮಾತಿಗೆ ಕೇಳುವಂತೆ ಬೆದರಿಸಿ, ಮಕ್ಕಳ ಅಶ್ಲೀಲ ಚಿತ್ರಗಳನ್ನು ಪಡೆದು ಅವುಗಳನ್ನು ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಅಕ್ಟೋಬರ್ 2023 ರಲ್ಲಿ ಎಫ್ಬಿಐ ನಡೆಸಿದ ತನಿಖೆಯಲ್ಲಿ ಈತನ ಕೃತ್ಯಗಳು ಬೆಳಕಿಗೆ ಬಂದವು. ಸಾಮಾಜಿಕ ಮಾಧ್ಯಮ ಖಾತೆಯೊಂದನ್ನು ಪರಿಶೀಲಿಸುತ್ತಿದ್ದಾಗ, ಅದರ ಐಪಿ ವಿಳಾಸವು ಕುರೆಮುಲಾನನ್ನು ತಲುಪಿತು. ನ್ಯಾಯಾಲಯದ ದಾಖಲೆಗಳ ಪ್ರಕಾರ, ಈತ ಕನಿಷ್ಠ 19 ಯುವತಿಯರನ್ನು ಇದೇ ರೀತಿ ವಂಚಿಸಿ ಶೋಷಿಸಿದ್ದಾನೆ. ಸಂತ್ರಸ್ತರು ವಿರೋಧ ವ್ಯಕ್ತಪಡಿಸಿದಾಗ, ಅವರನ್ನು ಮಾನಸಿಕವಾಗಿ ಕುಗ್ಗಿಸಿ, ಬೆದರಿಸಿ ಮತ್ತು ಅಶ್ಲೀಲ ಚಿತ್ರಗಳನ್ನು ಕಳುಹಿಸುವಂತೆ ಒತ್ತಾಯಿಸುತ್ತಿದ್ದ.
ಈತ ಮೂವರು ಅಪ್ರಾಪ್ತ ಬಾಲಕಿಯರನ್ನು ಲೈಂಗಿಕವಾಗಿ ಶೋಷಿಸಿದ ಮತ್ತು ಮಕ್ಕಳ ಅಶ್ಲೀಲ ಚಿತ್ರಗಳನ್ನು ಸಾಗಿಸಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಈ ಚಿತ್ರಗಳನ್ನು ತೋರಿಸುವುದಾಗಿ ಹಾಗೂ ಆನ್ಲೈನ್ನಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದನೆಂದು ತಿಳಿದುಬಂದಿದೆ.
ಕುರೆಮುಲಾ ಅವರ ಕೃತ್ಯಗಳನ್ನು ತೀವ್ರವಾಗಿ ಖಂಡಿಸಿರುವ ಒಕ್ಲಹೋಮ ನಗರದ ಎಫ್ಬಿಐ ವಿಶೇಷ ಏಜೆಂಟ್ ಡೌಗ್ ಗುಡ್ವಾಟರ್, ಈತ ಸಂತ್ರಸ್ತರಿಗೆ “ಊಹಿಸಲಾಗದ ಹಾನಿ” ಉಂಟುಮಾಡಿದ್ದಾನೆ ಎಂದು ಹೇಳಿದ್ದಾರೆ. ಯುಎಸ್ ಅಟಾರ್ನಿ ರಾಬರ್ಟ್ ಜೆ. ಟ್ರೋಸ್ಟರ್ ಅವರು, ಈ ಶಿಕ್ಷೆಯು ಮಕ್ಕಳನ್ನು ದುರ್ಬಳಕೆ ಮಾಡುವವರಿಗೆ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ ಎಂದಿದ್ದಾರೆ. ದುರ್ಬಲ ಮಕ್ಕಳಿಗೆ ಹಾನಿ ಮಾಡುವುದು ಗಂಭೀರ ಅಪರಾಧ ಎಂದು ಯುಎಸ್ ಜಿಲ್ಲಾ ನ್ಯಾಯಾಧೀಶ ಚಾರ್ಲ್ಸ್ ಗುಡ್ವಿನ್ ಅಭಿಪ್ರಾಯಪಟ್ಟಿದ್ದಾರೆ.