HomeIndiaಕೈಯಿಂದ ಊಟ ಮಾಡುವುದಕ್ಕೆ ವಿದೇಶಿಯನ ವ್ಯಂಗ್ಯ ; ಭಾರತೀಯ ಆಹಾರ ಸಂಪ್ರದಾಯದ ವೈಜ್ಞಾನಿಕ ಹಿನ್ನೆಲೆ ಬಿಚ್ಚಿಟ್ಟ...

ಕೈಯಿಂದ ಊಟ ಮಾಡುವುದಕ್ಕೆ ವಿದೇಶಿಯನ ವ್ಯಂಗ್ಯ ; ಭಾರತೀಯ ಆಹಾರ ಸಂಪ್ರದಾಯದ ವೈಜ್ಞಾನಿಕ ಹಿನ್ನೆಲೆ ಬಿಚ್ಚಿಟ್ಟ ಸನ್ಯಾಲ್‌ } Watch

ಭಾರತೀಯರು ಊಟ ಮಾಡುವಾಗ ಕೈ ಬಳಸುವ ಸಾಂಪ್ರದಾಯಿಕ ಪದ್ಧತಿಯನ್ನು ಅಪಹಾಸ್ಯ ಮಾಡಲು ಯತ್ನಿಸಿದ ಅಮೆರಿಕ ಮೂಲದ ನೆಟ್ಟಿಗನೊಬ್ಬನಿಗೆ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ (PMEAC) ಸದಸ್ಯ ಸಂಜೀವ್ ಸನ್ಯಾಲ್ ಎಕ್ಸ್ (ಟ್ವಿಟರ್) ತಾಣದಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ. ಈ ಮೂಲಕ ಪಾಶ್ಚಿಮಾತ್ಯ ಜಗತ್ತಿನಲ್ಲಿ ಇಂದಿಗೂ ಮನೆಮಾಡಿರುವ ‘ವಸಾಹತುಶಾಹಿ ಗುಲಾಮಿ ಮನಸ್ಥಿತಿ’ಯನ್ನು (Colonial Hangover) ಹಾಗೂ ಅವರ ಇಬ್ಬಗೆಯ ನೀತಿಯನ್ನು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ದಕ್ಷಿಣ ಭಾರತದ ಸಾಂಪ್ರದಾಯಿಕ ಮದುವೆ ಸಮಾರಂಭವೊಂದರಲ್ಲಿ ದಂಪತಿ ಬಾಳೆಎಲೆಯ ಮೇಲೆ ಬಡಿಸಿದ ಊಟವನ್ನು ಕೈಗಳಿಂದ ಅತ್ಯಂತ ಪ್ರೀತಿಯಿಂದ ಸವಿಯುತ್ತಿರುವ ವಿಡಿಯೋವೊಂದನ್ನು ಅಮೆರಿಕದ ಫ್ಲೋರಿಡಾ ಮೂಲದ ‘ಅಕಾ’ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರ ಹಂಚಿಕೊಂಡಿದ್ದನು. ಅಲ್ಲದೆ, “ಗಂಭೀರವಾಗಿ ಕೇಳುತ್ತಿದ್ದೇನೆ, ಇವರೆಲ್ಲರೂ ಕೈಗಳಿಂದಲೇ ಏಕೆ ಊಟ ಮಾಡುತ್ತಾರೆ?” ಎಂದು ಅವಹೇಳನಕಾರಿಯಾಗಿ ಪ್ರಶ್ನಿಸಿದ್ದನು.

‘ಮುಟ್ಟಲಾಗದ ಆಹಾರ ಬಾಯಿಗೆ ಹೇಗೆ ಹೋಗುತ್ತೆ?’ ಸನ್ಯಾಲ್ ಖಡಕ್ ಕೌಂಟರ್

ಈ ಪೋಸ್ಟ್‌ಗೆ ಅತ್ಯಂತ ಜಾಣ್ಮೆ ಹಾಗೂ ತಾರ್ಕಿಕವಾಗಿ ಪ್ರತಿಕ್ರಿಯಿಸಿದ ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್, “ಇದು ಅತ್ಯಂತ ಸರಳವಾದ ಪರೀಕ್ಷೆ… ಒಂದು ವೇಳೆ ನಿಮ್ಮ ಆಹಾರವನ್ನು ಮುಟ್ಟಲೂ ನಿಮ್ಮ ಕೈಗೆ ಅಸಹ್ಯವೆನಿಸಿ, ಲೋಹದ ಚಮಚ, ಫೋರ್ಕ್‌ನಂತಹ ಪರಿಕರಗಳೇ ಬೇಕೆನಿಸಿದರೆ, ಅಂತಹ ಆಹಾರವನ್ನು ಬಾಯಿಯೊಳಗೆ ಹಾಕಿಕೊಳ್ಳುವುದೇ ಒಂದು ಕೆಟ್ಟ ಆಲೋಚನೆ” ಎಂದು ಚಾಟಿ ಬೀಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಷ್ಟಕ್ಕೇ ನಿಲ್ಲಿಸದ ಅವರು, ಪಾಶ್ಚಿಮಾತ್ಯರ ದ್ವಂದ್ವ ನೀತಿಯನ್ನು ನೇರವಾಗಿ ಎತ್ತಿ ತೋರಿಸಿದ್ದಾರೆ. ಭಾರತೀಯರು ಅನ್ನ-ಸಾಂಬಾರು ಅಥವಾ ರೊಟ್ಟಿಯನ್ನು ಕೈಯಲ್ಲಿ ತಿಂದರೆ ಅಸಹ್ಯ, ಅನಾಗರಿಕ ಎನ್ನುವ ಇದೇ ವಿದೇಶಿಗರು, ತಮ್ಮ ದೇಶಗಳಲ್ಲಿ ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್, ಡೋನಟ್, ಟ್ಯಾಕೋ ಮತ್ತು ಬ್ರೆಡ್ಡುಗಳನ್ನು ತಮ್ಮ ಕೈಗಳಿಂದಲೇ ಹಿಡಿದು ತಿನ್ನುವಾಗ ಇವರ ಸ್ವಚ್ಛತೆಯ ಮಾನದಂಡ ಎಲ್ಲಿ ಹೋಗುತ್ತದೆ ಎಂದು ಪ್ರಶ್ನಿಸಿದ್ದಾರೆ.

“ಲೋಹದ ಚಮಚವನ್ನು ತೊಳೆಯುವುದು ಎಷ್ಟು ಸುಲಭವೋ, ಊಟಕ್ಕೆ ಮುನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದೂ ಅಷ್ಟೇ ಸುಲಭ” ಎಂದು ಕೈಯಿಂದ ತಿನ್ನುವುದು ಅಸ್ವಸ್ಥಕರ ಎಂದವರಿಗೆ ಸನ್ಯಾಲ್ ತಿರುಗೇಟು ನೀಡಿದ್ದಾರೆ.

ಪಾಶ್ಚಿಮಾತ್ಯರ ದ್ವಂದ್ವ ನಿಲುವು ಮತ್ತು ಆಹಾರ ರಾಜಕಾರಣ

ಭಾರತ ಹಾಗೂ ದಕ್ಷಿಣ ಏಷ್ಯಾದ ದೇಶಗಳಲ್ಲಿ ಕೈಯಿಂದ ಊಟ ಮಾಡುವುದರ ಹಿಂದೆ ಸಾವಿರಾರು ವರ್ಷಗಳ ಸಂಸ್ಕೃತಿ, ವಿಕಸನ ಮತ್ತು ಸ್ಪರ್ಶ ಸಂವೇದನೆಯ (Mindful Eating) ಆಳವಾದ ವಿಜ್ಞಾನವಿದೆ. ಆಹಾರದ ಉಷ್ಣತೆ ಎಷ್ಟಿದೆ, ಅದರ ಹದವೇನು ಎಂಬುದನ್ನು ಕೈಬೆರಳುಗಳು ಗ್ರಹಿಸಿದ ತಕ್ಷಣವೇ ಹೊಟ್ಟೆಯಲ್ಲಿ ಜೀರ್ಣರಸಗಳು ಸ್ರವಿಸಲು ಆರಂಭಿಸುತ್ತವೆ ಎಂಬುದು ಆಯುರ್ವೇದ ಹಾಗೂ ಆಧುನಿಕ ವಿಜ್ಞಾನದಲ್ಲೂ ಉಲ್ಲೇಖವಾಗಿದೆ.

ಆದರೆ ಯುರೋಪಿಯನ್ ವಸಾಹತುಶಾಹಿ ಕಾಲದಿಂದಲೂ “ಚಮಚ ಮತ್ತು ಫೋರ್ಕ್ ಹಿಡಿದು ತಿನ್ನುವುದೇ ನಾಗರಿಕತೆ, ಕೈಯಿಂದ ತಿನ್ನುವುದು ಅಸಭ್ಯ ಅಥವಾ ಪ್ರಾಚೀನ” ಎಂಬ ಸುಳ್ಳು ಕಥನವನ್ನು ಬಿತ್ತಲಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲೂ ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿತ್ತು. ನ್ಯೂಯಾರ್ಕ್ ರಾಜಕಾರಣಿ ಜೊಹ್ರಾನ್ ಮಮ್ದಾನಿ ಕೈಯಿಂದ ಅನ್ನ ತಿನ್ನುತ್ತಿದ್ದ ವಿಡಿಯೋ ನೋಡಿ ಟೆಕ್ಸಾಸ್ ಸಂಸದ ಬ್ರಾಂಡನ್ ಗಿಲ್, “ಅಮೆರಿಕದ ಸುಸಂಸ್ಕೃತ ಜನರು ಹೀಗೆ ತಿನ್ನುವುದಿಲ್ಲ, ಮೂರನೇ ಜಗತ್ತಿನ ದೇಶಕ್ಕೆ ವಾಪಸ್ ಹೋಗಿ” ಎಂದು ಜನಾಂಗೀಯ ನಿಂದನೆ ಮಾಡಿದ್ದು ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಸದ್ಯ ಸಂಜೀವ್ ಸನ್ಯಾಲ್ ನೀಡಿರುವ ಖಡಕ್ ಉತ್ತರಕ್ಕೆ ಭಾರತೀಯ ನೆಟ್ಟಿಗರಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದ್ದು, ನಮ್ಮ ಪ್ರಾಚೀನ ಸಂಸ್ಕೃತಿಯ ಹಿರಿಮೆಯನ್ನು ಕೀಳಾಗಿ ಕಾಣುವ ಪಾಶ್ಚಿಮಾತ್ಯರ ಅಹಂಕಾರಕ್ಕೆ ಸೂಕ್ತ ಪಾಠ ಕಲಿಸಲಾಗಿದೆ ಎಂದು ಶ್ಲಾಘಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular