ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲುಂಡ ಬಳಿಕ ಜಿಂಬಾಬ್ವೆ ಪ್ರವಾಸ ಕೈಗೊಂಡಿರುವ ಭಾರತ ಮೂರು ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನಾಡುತ್ತಿದ್ದು, ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಗೆಲುವು ಕಂಡು ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ಭಾರತ ಜಿಂಬಾಬ್ವೆ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಜಿಂಬಾಬ್ವೆ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಕಲೆಹಾಕಿ ಭಾರತಕ್ಕೆ 128 ರನ್ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ವೈಭವ್ ಸೂರ್ಯವಂಶಿ ಅಬ್ಬರದ ಅರ್ಧಶತಕ ಹಾಗೂ ಇಶಾನ್ ಕಿಶನ್ ಮತ್ತು ನಾಯಕ ಶ್ರೇಯಸ್ ಐಯ್ಯರ್ ಜವಾಬ್ದಾರಿಯುತ ಆಟದ ನೆರವಿನಿಂದ 13.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿ ಜಯ ದಾಖಲಿಸಿತು.
ಜಿಂಬಾಬ್ವೆ ಇನ್ನಿಂಗ್ಸ್: ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡ ಜಿಂಬಾಬ್ವೆ ಕೇವಲ 32 ರನ್ಗೆ ತನ್ನ 4 ವಿಕೆಟ್ ಕಳೆದುಕೊಂಡು ಕೆಟ್ಟ ಆರಂಭ ಕಂಡಿತು. ಬ್ರಿಯಾನ್ ಬೆನ್ನೆಟ್ ಡಕ್ಔಟ್ ಆದರೆ, ಬೆನ್ ಕರನ್ 10, ಡಿಯಾನ್ ಮೇರ್ಸ್ 6 ಹಾಗೂ ನಾಯಕ ಸಿಖಂದರ್ ರಾಜಾ 4 ರನ್ ಗಳಿಸಿ ವಿಫಲರಾದರು. ಇನ್ನುಳಿದಂತೆ ರಯಾನ್ ಬರ್ಲ್ 26, ವೆಸ್ಲಿ ಮೆಡೆವೆರ್ 39 ಹಾಗೂ ಮಾರುಮಾನಿ ಅಜೇಯ 27 ರನ್ ಗಳಿಸಿ ತಂಡಕ್ಕೆ ಸುಧಾರಣೆ ತಂದರಾದರೂ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಬ್ರಾಡ್ ಇವೆನ್ಸ್ ಡಕ್ಔಟ್ ಆದರೆ, ನ್ಯಾಮುರಿ ಅಜೇಯ 1 ರನ್ ಗಳಿಸಿದರು.
ಭಾರತದ ಪರ ಮಯಾಂಕ್ ಯಾದವ್ ಹಾಗೂ ಪ್ರಿನ್ಸ್ ಯಾದವ್ ತಲಾ ಎರಡು ವಿಕೆಟ್ ಪಡೆದರೆ, ಶಿವಮ್ ದುಬೆ ಹಾಗೂ ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್ ಪಡೆದರು.
ಭಾರತದ ಇನ್ನಿಂಗ್ಸ್: ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಕೇವಲ 1 ರನ್ಗೆ ಔಟ್ ಆದರೆ, ವೈಭವ್ ಸೂರ್ಯವಂಶಿ 18 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 50 ರನ್ ಬಾರಿಸಿ ಅಬ್ಬರಿಸಿ ನಂತರದ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಇದು ವೈಭವ್ ಬಾರಿಸಿದ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕವಾಗಿದ್ದು, ವಿಶ್ವ ಕ್ರಿಕೆಟ್ನಲ್ಲಿ ಅತಿ ಕಿರಿಯ ವಯಸ್ಸಿಗೆ ಅರ್ಧಶತಕ ಬಾರಿಸಿದ ಆಟಗಾರ ಎಂಬ ದಾಖಲೆಯೂ ಸಹ ಆಗಿದೆ. ಉಳಿದಂತೆ ಇಶಾನ್ ಕಿಶನ್ 24 ಎಸೆತಗಳಲ್ಲಿ 35 ಹಾಗೂ ನಾಯಕ ಶ್ರೇಯಸ್ ಐಯ್ಯರ್ 24 ಎಸೆತಗಳಲ್ಲಿ ಅಜೇಯ 28 ರನ್ ಹಾಗೂ ತಿಲಕ್ ವರ್ಮಾ ಅಜೇಯ 6 ರನ್ ಬಾರಿಸಿದರು.
ಜಿಂಬಾಬ್ವೆ ಪರ ಬ್ಲೆಸಿಂಗ್ ಮುಜರ್ಬಾನಿ ಎರಡು ವಿಕೆಟ್ ಹಾಗೂ ರಿಚಾರ್ ಎನ್ಗವರ ಒಂದು ವಿಕೆಟ್ ಪಡೆದರು.

