ಧಾರವಾಡ: ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್(IPPB) ಹಾಗೂ ಬಜಾಜ್ ಜನರಲ್ ಇನ್ಸೂರೆನ್ಸ್ ಸಹಭಾಗಿತ್ವದಲ್ಲಿ ಅಪಘಾತ ವಿಮಾ ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮ ನಡೆಯಿತು.
ನವನಗರ ಅಂಚೆ ಕಚೇರಿಯ ಅಂಚೆ ಸಿಬ್ಬಂದಿ ಸಂತೋಷ್ ಸೋನಾರ್ ಅವರ ಮೂಲಕ ಕೇವಲ ರೂ. 557ಕ್ಕೆ ಅಪಘಾತ ವಿಮೆ ಮಾಡಿಸಿಕೊಂಡಿದ್ದ ವಿಜಯಾನಂದ್ ಮಳಲಿ ಅವರು ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು. ವಿಮಾ ಪಾಲಿಸಿಯ ನಾಮಿನಿಯಾಗಿದ್ದ ಅಕ್ಷತಾ ಮಳಲಿ ಅವರಿಗೆ ಒಟ್ಟು ರೂ. 10.60 ಲಕ್ಷದ ಪರಿಹಾರ ಮೊತ್ತದ ಚೆಕ್ ಅನ್ನು ವಿತರಿಸಲಾಯಿತು.
ವಿಮಾ ಪರಿಹಾರದಲ್ಲಿ ರೂ. 10 ಲಕ್ಷ ಅಪಘಾತ ವಿಮಾ ಮೊತ್ತ, ರೂ. 50,000 ಮಕ್ಕಳ ಶೈಕ್ಷಣಿಕ ಪ್ರಯೋಜನ ಹಾಗೂ ಅಂತಿಮ ಸಂಸ್ಕಾರಕ್ಕೆ ಸಂಬಂಧಿಸಿದ ಪ್ರಯೋಜನಗಳು ಒಳಗೊಂಡಿವೆ.
ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ವಲಯ, ಧಾರವಾಡದ ಪ್ರಾದೇಶಿಕ ಮುಖ್ಯಸ್ಥ ಸುರೇಶ ವಿ.ಪಿ., ಹುಬ್ಬಳ್ಳಿ ಪಶ್ಚಿಮ ಉಪವಿಭಾಗದ ಉಪವಿಭಾಗೀಯ ಮುಖ್ಯಸ್ಥ ಮಾಣಿಕ್ ರಾವ್ ಕುಲಕರ್ಣಿ, IPPB ಧಾರವಾಡದ ಮ್ಯಾನೇಜರ್ ಶಿವಯೋಗಿ, ಹಾಗೂ ಬಜಾಜ್ ಜನರಲ್ ಇನ್ಸೂರೆನ್ಸ್ ಕಂಪನಿಯ ಹುಬ್ಬಳ್ಳಿ ವಲಯ ಮುಖ್ಯಸ್ಥ ಶ್ರೀಶೈಲ್ ಹೆಚ್.ಎಸ್. ಉಪಸ್ಥಿತರಿದ್ದರು.
ಕಡಿಮೆ ಮೊತ್ತದ ಪ್ರೀಮಿಯಂ ಮೂಲಕ ಅಂಚೆ ಕಚೇರಿಯಲ್ಲಿ ಲಭ್ಯವಿರುವ ಅಪಘಾತ ವಿಮೆ ಸಾರ್ವಜನಿಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.

