HomeBusinessGood News: ಭಾರತದಲ್ಲಿ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ!

Good News: ಭಾರತದಲ್ಲಿ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ!

ಕಾರು ಕೊಳ್ಳಬೇಕು ಎಂದು ಆಲೋಚನೆ ಮಾಡುತ್ತಿರುವ ಜನರಿಗೆ ಸಿಹಿಸುದ್ದಿ ಇದೆ. ಹೌದು ದೇಶದಲ್ಲಿ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಒಂದು ತೀರ್ಮಾನದಿಂದ ಈ ಬೆಲೆ ಕಡಿಮೆಯಾಗಲಿದೆ.

ಭಾರತ ಯುರೋಪಿಯನ್ ಒಕ್ಕೂಟದಿಂದ ಆಮದು ಮಾಡಿಕೊಳ್ಳುವ ಕಾರುಗಳ ಮೇಲಿನ ಸುಂಕವನ್ನು ಶೇಕಡಾ 110 ರಿಂದ ಶೇಕಡಾ 40ಕ್ಕೆ ಇಳಿಸಲು ಚಿಂತನೆ ನಡೆಸಿದೆ. ಮಂಗಳವಾರದೊಳಗೆ ಅಂತಿಮಗೊಳ್ಳಲಿರುವ ಮುಕ್ತ ವ್ಯಾಪಾರ ಒಪ್ಪಂದದ ಭಾಗವಾಗಿ, ದೇಶದ ವಿಶಾಲ ಮಾರುಕಟ್ಟೆಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಇದು ಅತಿದೊಡ್ಡ ಹೆಜ್ಜೆಯಾಗಿದೆ ಎಂದು ಬಣ್ಣಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು 15,000 ಯುರೋಗಳಿಗಿಂತ ಹೆಚ್ಚು ಆಮದು ಬೆಲೆ ಹೊಂದಿರುವ 27 ರಾಷ್ಟ್ರಗಳ ಒಕ್ಕೂಟದ ಸೀಮಿತ ಸಂಖ್ಯೆಯ ಕಾರುಗಳ ಮೇಲಿನ ತೆರಿಗೆಯನ್ನು ತಕ್ಷಣವೇ ಕಡಿತಗೊಳಿಸಲು ಒಪ್ಪಿಕೊಂಡಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಂದಿನ ದಿನಗಳಲ್ಲಿ ಈ ತೆರಿಗೆಯನ್ನು ಶೇಕಡಾ 10ಕ್ಕೆ ಇಳಿಸಲಾಗುವುದು ಎಂದು ವರದಿ ಹೇಳಿದೆ. ಇದು ಫೋಕ್ಸ್‌ವ್ಯಾಗನ್, ಮರ್ಸಿಡಿಸ್ ಬೆಂಜ್ ಮತ್ತು ಬಿಎಂಡಬ್ಲ್ಯು ನಂತಹ ಯುರೋಪಿಯನ್ ಕಾರು ತಯಾರಕರಿಗೆ ಭಾರತೀಯ ಮಾರುಕಟ್ಟೆಯನ್ನು ಸುಲಭವಾಗಿ ಪ್ರವೇಶಿಸಲು ಅನುಕೂಲವಾಗಲಿದೆ.

ಈ ಮಾತುಕತೆ ಕೊನೆಯ ಹಂತದಲ್ಲಿದ್ದು, ಅಂತಿಮ ಬದಲಾವಣೆಗೆ ಒಳಪಟ್ಟಿರುತ್ತದೆ ಎಂಬ ಮಾಹಿತಿ ಇದೆ. ಆದರೆ ತಕ್ಷಣ ಈ ಕುರಿತು ಪ್ರತಿಕ್ರಿಯಿಸಲು ಭಾರತದ ವಾಣಿಜ್ಯ ಸಚಿವಾಲಯ ಮತ್ತು ಯುರೋಪಿಯನ್ ಕಮಿಷನ್ ನಿರಾಕರಿಸಿವೆ.

ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ದೀರ್ಘಕಾಲದ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು ಮುಕ್ತಾಯಗೊಂಡಿವೆ. ಇದನ್ನು ಅಧಿಕೃತವಾಗಿ ಭಾರತ ಮತ್ತು ಯುರೋಪಿಯನ್ ಒಕ್ಕೂಟ ಮಂಗಳವಾರ ಘೋಷಿಸುವ ನಿರೀಕ್ಷೆಯಿದೆ.

ಎರಡೂ ಕಡೆಯ ವಿವರಗಳನ್ನು ಅಂತಿಮಗೊಳಿಸಿ, ಮದರ್ ಆಫ್ ಆಲ್ ಡೀಲ್ಸ್ ಎಂದು ಕರೆಯಲಾಗುತ್ತಿರುವ ಈ ಮಹತ್ವದ ಒಪ್ಪಂದವನ್ನು ಅನುಮೋದಿಸಲಾಗುತ್ತದೆ. ಈ ಒಪ್ಪಂದವು ದ್ವಿಪಕ್ಷೀಯ ವ್ಯಾಪಾರವನ್ನು ವಿಸ್ತರಿಸಬಹುದು ಮತ್ತು ಆಗಸ್ಟ್ ಅಂತ್ಯದಿಂದ ಅಮೆರಿಕ ಹೇರಿರುವ ಶೇ 50ರಷ್ಟು ಸುಂಕದಿಂದ ಸಂಕಷ್ಟಕ್ಕೀಡಾಗಿರುವ ಭಾರತದ ಜವಳಿ ಮತ್ತು ಆಭರಣಗಳಂತಹ ರಫ್ತುಗಳಿಗೆ ಉತ್ತೇಜನ ನೀಡಬಹುದು ಎಂದು ಅಂದಾಜಿಸಲಾಗಿದೆ.

ಅಮೆರಿಕ ಮತ್ತು ಚೀನಾ ನಂತರ ಭಾರತವು ಮಾರಾಟದ ದೃಷ್ಟಿಯಿಂದ ವಿಶ್ವದ ಮೂರನೇ ಅತಿದೊಡ್ಡ ಕಾರು ಮಾರುಕಟ್ಟೆಯಾಗಿದೆ. ಆದರೆ ಭಾರತದ ದೇಶೀಯ ಆಟೋ ಉದ್ಯಮವು ಆಮದು ತೆರಿಗೆ ಕಾರಣಕ್ಕೆ ಸುದ್ದಿಯಲ್ಲಿದೆ. ಪ್ರಸ್ತುತ ಆಮದು ಮಾಡಿದ ಕಾರುಗಳ ಮೇಲೆ ಶೇ 70 ಮತ್ತು ಶೇ 110ರಷ್ಟು ಸುಂಕವನ್ನು ಭಾರತ ವಿಧಿಸುತ್ತಿದೆ. ಈ ತೆರಿಗೆ ಮಟ್ಟವನ್ನು ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಸೇರಿದಂತೆ ಹಲವು ಗಣ್ಯರು ಆಗಾಗ ಟೀಕಿಸಿದ್ದರು.

ಮಾಹಿತಿಗಳ ಪ್ರಕಾರ ಮಹಿಂದ್ರಾ ಆಂಡ್ ಮಹಿಂದ್ರಾ ಮತ್ತು ಟಾಟಾ ಮೋಟಾರ್ಸ್‌ನಂತಹ ದೇಶೀಯ ಕಂಪನಿಗಳು ಈ ಕ್ಷೇತ್ರದಲ್ಲಿ ಮಾಡಿರುವ ಹೂಡಿಕೆಯನ್ನು ರಕ್ಷಿಸಲು, ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳನ್ನು ಮೊದಲ 5 ವರ್ಷಗಳ ಕಾಲ ಆಮದು ಸುಂಕ ಕಡಿತದಿಂದ ಹೊರಗಿಡಲಾಗುತ್ತದೆ.

ಐದು ವರ್ಷಗಳ ನಂತರ ಎಲೆಕ್ಟ್ರಿಕ್ ವಾಹನಗಳಿಗೂ ಇತರ ಕಾರುಗಳಂತೆಯೇ ಸುಂಕ ಕಡಿತ ಅನ್ವಯವಾಗಲಿದೆ. ತೆರಿಗೆಯ ಕಡಿತ ಫೋಕ್ಸ್‌ವ್ಯಾಗನ್, ರೆನಾಲ್ಟ್, ಮತ್ತು ಸ್ಟೆಲ್ಲಾಂಟಿಸ್ ನಂತಹ ಯುರೋಪಿಯನ್ ಕಾರು ತಯಾರಕರಿಗೆ ಹಾಗೂ ಮರ್ಸಿಡಿಸ್ ಬೆಂಜ್ ಮತ್ತು ಬಿಎಂಡಬ್ಲ್ಯು ನಂತಹ ಐಷಾರಾಮಿ ಕಂಪನಿಗಳಿಗೆ ದೊಡ್ಡ ಮಟ್ಟದ ಉತ್ತೇಜನ ನೀಡಲಿದೆ.

ಈ ಕಂಪನಿಗಳು ಈಗಾಗಲೇ ಭಾರತದಲ್ಲಿ ಸ್ಥಳೀಯವಾಗಿ ಕಾರುಗಳನ್ನು ತಯಾರಿಸುತ್ತಿವೆಯಾದರೂ, ಹೆಚ್ಚಿನ ಆಮದು ಸುಂಕದ ಕಾರಣದಿಂದಾಗಿ ಒಂದು ಹಂತದ ನಂತರ ಮಾರುಕಟ್ಟೆಯಲ್ಲಿ ಸಂಕಷ್ಟ ಅನುಭವಿಸುತ್ತಿದ್ದವು.

ಕಡಿಮೆ ಆಮದು ತೆರಿಗೆಯ ಕಾರಣ ಕಾರು ತಯಾರಕರು ಆಮದು ಮಾಡಿದ ವಾಹನಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ, ಸ್ಥಳೀಯವಾಗಿ ಹೆಚ್ಚಿನ ಕಾರುಗಳ ತಯಾರಿಕೆಗೆ ಅವಕಾಶ ನೀಡುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಭಾರತದ ವಾರ್ಷಿಕ 44 ಲಕ್ಷ ಯುನಿಟ್‌ಗಳ ಕಾರು ಮಾರುಕಟ್ಟೆಯಲ್ಲಿ ಯುರೋಪಿಯನ್ ಕಾರು ತಯಾರಕರ ಪಾಲು ಶೇಕಡಾ 4ಕ್ಕಿಂತ ಕಡಿಮೆಯಿದೆ. ಮಾರುಕಟ್ಟೆಯಲ್ಲಿ ಜಪಾನ್‌ನ ಸುಜುಕಿ ಮೋಟಾರ್ ಹಾಗೂ ಭಾರತದ ಸ್ವದೇಶಿ ಬ್ರ್ಯಾಂಡ್‌ಗಳಾದ ಮಹಿಂದ್ರಾ ಮತ್ತು ಟಾಟಾ ಪ್ರಾಬಲ್ಯ ಹೊಂದಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular