HomeBusinessಮನೆಯಲ್ಲಿ ನಗದು ಇರಿಸಲು ಮಿತಿ ಇದೆಯೇ ? ಹೀಗಿದೆ ಆದಾಯ ತೆರಿಗೆ ಕಾಯ್ದೆಯ ನಿಯಮ !

ಮನೆಯಲ್ಲಿ ನಗದು ಇರಿಸಲು ಮಿತಿ ಇದೆಯೇ ? ಹೀಗಿದೆ ಆದಾಯ ತೆರಿಗೆ ಕಾಯ್ದೆಯ ನಿಯಮ !

ಬ್ಯಾಂಕ್ ಖಾತೆಗಳಲ್ಲಿ ಹಣ ಇಡುವ ಬದಲು ಕೆಲವರು ಮನೆಯಲ್ಲೇ ಅಪಾರ ಪ್ರಮಾಣದ ನಗದು ಹಣವನ್ನು ಸಂಗ್ರಹಿಸಿಟ್ಟುಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ಈ ರೀತಿ ಮನೆಯಲ್ಲಿ ದೊಡ್ಡ ಮೊತ್ತದ ನಗದು ಇರಿಸಿಕೊಳ್ಳುವ ವಿಚಾರದಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆಯ ನಿಯಮಗಳು ಏನು ಹೇಳುತ್ತವೆ ಎಂಬ ಬಗ್ಗೆ ಪ್ರತಿಯೊಬ್ಬರೂ ಸ್ಪಷ್ಟ ಮಾಹಿತಿ ಹೊಂದಿರುವುದು ಅತ್ಯಗತ್ಯ. ನಿಯಮಗಳನ್ನು ಸರಿಯಾಗಿ ಅರಿತುಕೊಂಡರೆ ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಕಾನೂನು ಅಥವಾ ಇಲಾಖಾ ತನಿಖೆಯ ತೊಂದರೆಗಳಿಂದ ಮುಕ್ತವಾಗಿರಲು ಸಾಧ್ಯ.

ಭಾರತೀಯ ಆದಾಯ ತೆರಿಗೆ ಇಲಾಖೆಯ ನಿಯಮಾವಳಿಗಳ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ಇಟ್ಟುಕೊಳ್ಳಬಹುದಾದ ನಗದು ಮೊತ್ತಕ್ಕೆ ಯಾವುದೇ ಗರಿಷ್ಠ ಮಿತಿ ಇಲ್ಲ. ಕಾನೂನುಬದ್ಧವಾಗಿ ಒಬ್ಬ ವ್ಯಕ್ತಿ ಒಂದು ಲಕ್ಷ, ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ನಗದನ್ನು ಕೂಡ ಮನೆಯಲ್ಲಿ ಇರಿಸಿಕೊಳ್ಳಬಹುದು. ಆದರೆ, ಈ ರೀತಿ ಹಣ ಇರಿಸಲು ಇಲಾಖೆಯು ಕೆಲವೊಂದು ಕಡ್ಡಾಯ ಷರತ್ತುಗಳನ್ನು ವಿಧಿಸಿದೆ.

ಮನೆಯಲ್ಲಿ ಸಂಗ್ರಹಿಸಿಟ್ಟಿರುವ ಪ್ರತಿಯೊಂದು ರೂಪಾಯಿಗೂ ಅಧಿಕೃತ ಹಾಗೂ ನಿಖರವಾದ ಆದಾಯದ ಮೂಲ ಇರಲೇಬೇಕು. ಒಂದು ವೇಳೆ ಯಾವುದೇ ಕಾರಣಕ್ಕಾಗಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿದರೆ, ಆ ಹಣ ಎಲ್ಲಿಂದ ಬಂತು ಮತ್ತು ಹೇಗೆ ಬಂತು ಎಂಬುದನ್ನು ಸ್ಪಷ್ಟ ದಾಖಲೆಗಳ ಮೂಲಕ ಸಾಬೀತುಪಡಿಸಬೇಕಾಗುತ್ತದೆ. ನಗದಿನ ಮೂಲವನ್ನು ಸಾಬೀತುಪಡಿಸಲು ವಿಫಲವಾದರೆ ಕಾನೂನು ಸಂಕಷ್ಟ ಎದುರಾಗುವುದು ಖಚಿತ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಷ್ಟೇ ಅಲ್ಲದೆ, ಗಳಿಸಿದ ಆದಾಯಕ್ಕೆ ನಿಯಮಾನುಸಾರ ಆದಾಯ ತೆರಿಗೆ ಪಾವತಿಸಿರಬೇಕು. ಘೋಷಿಸಿದ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ನಗದು ಪತ್ತೆಯಾದರೆ ಮತ್ತು ಅದಕ್ಕೆ ಸೂಕ್ತ ವಿವರಣೆ ನೀಡಲು ಸಾಧ್ಯವಾಗದಿದ್ದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಭಾರಿ ಪ್ರಮಾಣದ ದಂಡ ಹಾಗೂ ಅಧಿಕ ತೆರಿಗೆಯನ್ನು ವಿಧಿಸಲಾಗುತ್ತದೆ.

ಆದಾಯ ಎಂದರೆ ಕೇವಲ ತಿಂಗಳ ವೇತನ ಮಾತ್ರವಲ್ಲದೆ ಉಳಿತಾಯ ಖಾತೆಯಿಂದ ಬರುವ ಬಡ್ಡಿ, ವ್ಯಾಪಾರ-ವಹಿವಾಟಿನ ಲಾಭ, ಹೂಡಿಕೆಗಳಿಂದ ಬಂದ ಆದಾಯ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ಬಂದ ಆದಾಯಗಳೆಲ್ಲವೂ ಒಳಗೊಂಡಿರುತ್ತವೆ. ಈ ಎಲ್ಲಾ ಮೂಲಗಳಿಂದ ಬಂದ ಒಟ್ಟು ಆದಾಯಕ್ಕೆ ತೆರಿಗೆ ಅನ್ವಯವಾಗುವುದರಿಂದ, ತೆರಿಗೆ ವಿವರ ಸಲ್ಲಿಕೆ ವೇಳೆ ಇವುಗಳಿಗೆ ಸಂಬಂಧಿಸಿದ ಪ್ರತಿಯೊಂದು ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಮುಖ್ಯ.

ಇನ್ನು ಬ್ಯಾಂಕ್ ಖಾತೆಗಳಿಗೆ ನಗದು ಜಮೆ ಮಾಡುವ ವಿಚಾರದಲ್ಲೂ ಕಟ್ಟುನಿಟ್ಟಿನ ನಿಯಮವಿದೆ. ಒಂದು ಹಣಕಾಸು ವರ್ಷದಲ್ಲಿ ಒಟ್ಟಾರೆಯಾಗಿ ಹತ್ತು ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದರೆ ಆ ವಿವರಗಳು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಹೋಗುತ್ತವೆ. ಹತ್ತು ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ಜಮೆಗೆ ಅಧಿಕೃತ ಮೂಲವನ್ನು ಸ್ಪಷ್ಟಪಡಿಸಬೇಕಾಗುತ್ತದೆ ಮತ್ತು ಅನ್ವಯವಾಗುವ ತೆರಿಗೆ ಪಾವತಿಸಬೇಕಾಗುತ್ತದೆ. ಪ್ರತಿಯೊಂದು ನಯಾಪೈಸೆಗೂ ಸರಿಯಾದ ಲೆಕ್ಕ ಮತ್ತು ದಾಖಲೆಗಳನ್ನು ನಿರ್ವಹಿಸಿದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular