ಬೆಂಗಳೂರು: ಆದಾಯ ತೆರಿಗೆ ವಂಚನೆ ಆರೋಪದಲ್ಲಿ ನಟಿ ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ ನಡೆದಿದೆ. ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದೆ.
ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಬ್ಯಾಸ್ಟಿಯನ್ ಗಾರ್ಡನ್ ಸಿಟಿ ಪಬ್ ಮೇಲೆ ಐಟಿ ಅಧಿಕಾರಿಗಳು ನಡೆಸಿ ಮಹತ್ವದ ದಾಖಲೆ ವಶಕ್ಕೆ ಪಡೆದುಕೊಂಡಿದ್ದಾರೆ.
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಹಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದು, ಪ್ರಕರಣಗಳ ಮುಂದುವರೆದ ಭಾಗವಾಗಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಮುಂಬೈ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆ ವಶಕ್ಕೆ ಪಡೆದಿದೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಶಿಲ್ಪಾ ಶೆಟ್ಟಿ, ನಮ್ಮ ವಿರುದ್ಧದ ಆರೋಪಗಳು ಆಧಾರ ರಹಿತ. ಯಾವುದೇ ಕಾನೂನಿನ ಆಧಾರವಿಲ್ಲದೆ ಅದಕ್ಕೆ ಕ್ರಿಮಿನಲ್ ಬಣ್ಣ ಬಳಿಯಲಾಗುತ್ತಿದೆ. ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಬಾಕಿ ಇದೆ. ತನಿಖೆಗೆ ಸಹಕರಿಸುತ್ತಿದ್ದೇವೆ. ನ್ಯಾಯಕ್ಕೆ ಜಯವಾಗುತ್ತದೆ ಎಂದು ನಂಬಿದ್ದೇವೆ ಎಂದು ತಿಳಿಸಿದ್ದಾರೆ.

