ಮಂಗಳೂರು: ವಿಧಾನಸೌಧದ ಮುಖ್ಯ ಪ್ರವೇಶ ದ್ವಾರ ಉದ್ಘಾಟನೆ ಕಾರ್ಯಕ್ರಮ ಮಾರ್ಚ್ 25ರಂದು ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರವೇಶ ದ್ವಾರವು ಸುಂದರ ಕೆತ್ತನೆಗಳೊಂದಿಗೆ ಕರ್ನಾಟಕ ಶೈಲಿ ಹೊಂದಿದೆ. ಲೋಕೋಪಯೋಗಿ ಇಲಾಖೆ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಮೂಲಕ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಬಳಿ ಮತ್ತು ಹೈಕೋರ್ಟ್ ಕಡೆಯಿಂದ ಪ್ರವೇಶ ದ್ವಾರ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಕರೆಯಲಾಗಿದೆ. ವಿಧಾನಸೌಧಕ್ಕೆ ಭಾಗಶಃ ವಿದ್ಯುತ್ ಪೂರೈಸುವ ಸೋಲಾರ್ ಪ್ಯಾನೆಲ್ ಗಳನ್ನು ಮಾರ್ಚ್ 25ರಂದು ಉದ್ಘಾಟಿಸಲಾಗುವುದು ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.

