ನವದೆಹಲಿ: ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯನ್ನು (Red Fort) ಸಾರ್ವಜನಿಕರ ಪ್ರವೇಶಕ್ಕೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಜುಲೈ 15ರಿಂದ ಆಗಸ್ಟ್ 15ರವರೆಗೆ ಪ್ರವಾಸಿಗರಿಗೆ ಕೆಂಪುಕೋಟೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.
ಭದ್ರತಾ ವ್ಯವಸ್ಥೆಗಳು ಮತ್ತು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಸಿದ್ಧತೆಗಳ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಈ ಆದೇಶ ಹೊರಡಿಸಿದೆ.
ಪ್ರತಿ ವರ್ಷ ಆಗಸ್ಟ್ 15ರಂದು ಪ್ರಧಾನಮಂತ್ರಿ ಅವರು ಕೆಂಪುಕೋಟೆಯ ಕೋಟೆಯ ಮೇಲ್ಭಾಗದಿಂದ ರಾಷ್ಟ್ರಧ್ವಜ ಹಾರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಕಾರ್ಯಕ್ರಮಕ್ಕೆ ಸಾವಿರಾರು ಗಣ್ಯರು, ಅಧಿಕಾರಿಗಳು ಹಾಗೂ ಆಹ್ವಾನಿತರು ಆಗಮಿಸುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತದೆ.
ಒಂದು ತಿಂಗಳ ಕಾಲ ಬಂದ್ ಏಕೆ?
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕಾಗಿ ಭದ್ರತಾ ತಪಾಸಣೆ, ವೇದಿಕೆ ನಿರ್ಮಾಣ, ಆಸನ ವ್ಯವಸ್ಥೆ, ಪೂರ್ವಾಭ್ಯಾಸ ಮತ್ತು ವಿವಿಧ ಭದ್ರತಾ ಪಡೆಗಳ ನಿಯೋಜನೆ ನಡೆಯಲಿದೆ. ಈ ಕಾರಣದಿಂದಾಗಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿರುವ ಕೆಂಪುಕೋಟೆಯಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಹಿಂದೆ ಕೂಡ ಕೆಂಪುಕೋಟೆ ಬಂದ್ ಮಾಡಲಾಗಿತ್ತು
ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಕೆಂಪುಕೋಟೆಯನ್ನು ಬಂದ್ ಮಾಡಿರುವುದು ಇದೇ ಮೊದಲಲ್ಲ. 2025ರಲ್ಲೂ ಜುಲೈ 15ರಿಂದ ಆಗಸ್ಟ್ 15ರವರೆಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.ಇದಕ್ಕೂ ಮೊದಲು 2021ರಲ್ಲಿ ಜುಲೈ 21ರಿಂದ ಆಗಸ್ಟ್ 15ರವರೆಗೆ, 2018ರಲ್ಲಿ ಆಗಸ್ಟ್ 8ರಿಂದ ಆಗಸ್ಟ್ 15ರವರೆಗೆ ಕೆಂಪುಕೋಟೆಯನ್ನು ಸಾರ್ವಜನಿಕರಿಗೆ ಮುಚ್ಚಲಾಗಿತ್ತು.
ಬಾಂಬ್ ಬೆದರಿಕೆ ಕರೆ ಹಿನ್ನೆಲೆ
ಕೆಲವು ದಿನಗಳ ಹಿಂದೆ ದೆಹಲಿಯ ಕೆಂಪುಕೋಟೆಯನ್ನು ಸ್ಫೋಟಿಸುವುದಾಗಿ ಮುಂಬೈ ಪೊಲೀಸರಿಗೆ ಬೆದರಿಕೆ ಕರೆ ಬಂದಿತ್ತು. ಬಳಿಕ ತನಿಖೆ ನಡೆಸಿದ ಪೊಲೀಸರು ಅದು ಹುಸಿ ಬೆದರಿಕೆ ಕರೆ ಎಂದು ಪತ್ತೆಹಚ್ಚಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಭದ್ರತಾ ಸಂಸ್ಥೆಗಳು ಮುಂಚಿತವಾಗಿ ಕೆಂಪುಕೋಟೆಯ ನಿಯಂತ್ರಣವನ್ನು ವಹಿಸಿಕೊಳ್ಳುತ್ತವೆ. ಈ ಬಾರಿ ಕೂಡ ಆಗಸ್ಟ್ 15ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಮುಂದುವರಿಯಲಿದೆ.

