ಶ್ರೀ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಡಿಸೆಂಬರ್ 27ರಂದು ಅಯ್ಯಪ್ಪ ಸ್ವಾಮಿಗೆ ಮಂಡಲ ಪೂಜೆ ನೆರವೇರಿಸಲಾಗುವುದು. ಅಂದು ಬೆಳಗ್ಗೆ 10.10 ರಿಂದ 11:30 ವರೆಗಿನ ಮುಹೂರ್ತದಲ್ಲಿ ಈ ವರ್ಷದ ಮಂಡಲ ಪೂಜೆ ನಡೆಯಲಿದೆ. ಮಂಡಳಿ ಪೂಜೆಗೆ ಸಂಬಂಧಿಸಿದ ದೀಪಾರಾಧನೆ ಬೆಳಿಗ್ಗೆ 11:30ಕ್ಕೆ ಪೂರ್ಣಗೊಳ್ಳಲಿದೆ.
ಮಂಡಲ ಪೂಜೆಗಾಗಿ ಅಯ್ಯಪ್ಪ ಸ್ವಾಮಿಗೆ ತೊಡಿಸುವ ತಂಗ ಅಂಗಿ ಆಭರಣಗಳನ್ನು ಹೊತ್ತು ತರುವ ರಥದ ಮೆರವಣಿಗೆ ಡಿಸೆಂಬರ್ 23 ರಂದು ಬೆಳಗ್ಗೆ 7 ಗಂಟೆಗೆ ಆರಣ್ಮುಲ ಪಾರ್ಥಸಾರಥಿ ದೇವಸ್ಥಾನದಿಂದ ಹೊರಟು ಡಿಸೆಂಬರ್ 26ರಂದು ಸಂಜೆ ದೀಪಾರಾಧನೆಗೆ ಮೊದಲು ಸನ್ನಿಧಾನಕ್ಕೆ ತಲುಪಲಿದೆ. ತಂಗ ಅಂಗಿಯನ್ನು ಅಯ್ಯಪ್ಪ ಸ್ವಾಮಿ ವಿಗ್ರಹದ ಮೇಲೆ ಇಟ್ಟು ಸಂಜೆ 6.30ಕ್ಕೆ ದೀಪಾರಾಧನೆ ನೆರವೇರಿಸಲಾಗುವುದು.
ಡಿಸೆಂಬರ್ 27ರಂದು ಮಧ್ಯಾಹ್ನ ತಂಗ ಅಂಗಿ ತೊಡಿಸಿ ಮಂಡಲ ಪೂಜೆ ನಡೆಸಲಾಗುವುದು. ಡಿಸೆಂಬರ್ 27 ರಂದು ರಾತ್ರಿ 11 ಗಂಟೆಗೆ ಹರಿವರಾಸನಂ ಗಾಯನದೊಂದಿಗೆ ದೇವಾಲಯ ಮುಚ್ಚಲಾಗುವುದು.
ಡಿಸೆಂಬರ್ 30ರಂದು ಸಂಜೆ 5 ಗಂಟೆಗೆ ಮಕರ ಜ್ಯೋತಿ ಉತ್ಸವಕ್ಕಾಗಿ ಮತ್ತೆ ದೇವಾಲಯ ತೆರೆಯಲಾಗುವುದು ಎಂದು ತಂತ್ರಿ ಕಂಠರರ್ ಮಹೇಶ್ ಮೋಹನರ್ ತಿಳಿಸಿದ್ದಾರೆ.

