ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದ್ದು, ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.
ಅಕ್ರಮ ಮರಳು ಸಾಗಾಟ ವಿಚಾರವಾಗಿ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿರುವ ಹೈಕೋರ್ಟ್, ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತಿಳಿಸಿದೆ.
ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ನ್ಯಾಯಾಲಯ, ಅಕ್ರಮ ಮರಳು ಸಾಗಣೆಯನ್ನು ತಡೆಯಲು ಗೃಹ ಸಚಿವರೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ಸ್ಪಷ್ಟ ಎಂದು ಅಭಿಪ್ರಾಯಪಟ್ಟಿದೆ.
ಮರಳು ದಂಧೆಯಲ್ಲಿ ರಾಜಕೀಯ ಪಕ್ಷಗಳ ಪ್ರಭಾವಿಗಳು ಭಾಗಿಯಾಗಿರುವ ಶಂಕೆ ಇದೆ ಎಂಬ ಮಾತುಗಳೂ ಕೇಳಿಬಂದಿವೆ. ಅಕ್ರಮ ಮರಳು ಸಾಗಣೆಯಿಂದ ಕೃಷಿ ಜಮೀನುಗಳು ಹಾಳಾಗುತ್ತಿವೆ, ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಮರಳು ದಂಧೆ ತಡೆಯಲು ರಚಿಸಲಾದ ಸ್ಪೆಷಲ್ ಟಾಸ್ಕ್ ಫೋರ್ಸ್ ಕೇವಲ ಹೆಸರಿಗಷ್ಟೇ ಇದ್ದು, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಕಂಡುಬರುತ್ತಿದೆ.
ರಾಯಚೂರು ಜಿಲ್ಲೆಯ ಮಹಿಳಾ ಶಾಸಕರಿಗೆ ಅಕ್ರಮ ಮರಳು ದಂಧೆಕೋರರು ಜೀವ ಬೆದರಿಕೆ ಹಾಕಿರುವ ವರದಿಯನ್ನೂ ಕೋರ್ಟ್ ಉಲ್ಲೇಖಿಸಿದೆ. ಮರಳು ಗಣಿಗಾರಿಕೆಗೆ ಕಾನೂನುಬದ್ಧವಾಗಿ ಗುತ್ತಿಗೆ ನೀಡಿದರೆ ಸರ್ಕಾರಕ್ಕೆ ಆದಾಯವೂ ಬರುತ್ತದೆ, ಅಕ್ರಮವೂ ಕಡಿಮೆಯಾಗಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ, ಅಕ್ರಮ ಮರಳು ಸಾಗಣೆ ಪ್ರಕರಣಗಳ ತನಿಖೆಯನ್ನು ಹೈಕೋರ್ಟ್ ಉಸ್ತುವಾರಿಯಲ್ಲಿ ಕೇಂದ್ರ ತನಿಖಾ ಸಂಸ್ಥೆ ಅಥವಾ ವಿಶೇಷ ತನಿಖಾ ತಂಡ ಮೂಲಕ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ತಾರಾ ವಿತಸ್ತ ಗಂಜು ಅವರಿದ್ದ ಪೀಠ ವ್ಯಕ್ತಪಡಿಸಿದೆ. ಈ ಬಗ್ಗೆ ಗೃಹ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಅಕ್ರಮ ಮರಳು ಸಾಗಣೆ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ಉತ್ತರ ನೀಡುವಂತೆ ಸೂಚಿಸಿದೆ.

