ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಗುಡ್‌ನ್ಯೂಸ್ ನೀಡಲಿದೆ. ಈಗಾಗಲೇ ಖಾದಿ ಬಟ್ಟೆ ಧರಿಸಲು ಸುತ್ತೋಲೆ ಹೊರಡಿಸಲಾಗಿದೆ. ಈಗ ರೇಷ್ಮೆ ಬಟ್ಟೆ ಖರೀದಿಗೆ ರಿಯಾಯಿತಿಯನ್ನು ಘೋಷಣೆ ಮಾಡಲಾಗುತ್ತದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದ ನಿಯೋಗ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಭೇಟಿಯ ವೇಳೆ ಈ ಕುರಿತು ಮನವಿಯನ್ನು ಸಲ್ಲಿಕೆ ಮಾಡಿದೆ.
ಪ್ರಸ್ತಾಪಿಸಿದ ಪ್ರಮುಖ ವಿಷಯಗಳು: ರಾಜ್ಯ ಸರ್ಕಾರಿ ನೌಕರರ ಸಂಘ ಪ್ರಕಟಣೆ ಮೂಲಕ ಮುಖ್ಯ ಕಾರ್ಯದರ್ಶಿಗಳ ಬಳಿ ಯಾವ ಯಾವ ವಿಚಾರವನ್ನು ಚರ್ಚಿಸಲಾಯಿತು ಎಂದು ಮಾಹಿತಿಯನ್ನು ನೀಡಿದೆ.
* ಎಂ.ಎಸ್.ಐ.ಎಲ್. ಸಂಸ್ಥೆಯ ಮೂಲಕ ಸೇನಾ ಕ್ಯಾಂಟೀನ್ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ದಿನಬಳಕೆ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪೂರೈಸಲು ಸರ್ಕಾರಿ ನೌಕರರ ಕ್ಯಾಂಟೀನ್ ಪ್ರಾರಂಭಿಸಲು 2026-27ನೇ ಸಾಲಿನ ಆಯ-ವ್ಯಯದಲ್ಲಿ ಈ ಯೋಜನೆಯನ್ನು ಘೋಷಣೆ ಮಾಡುವುದು.
* ಕೆ.ಎಸ್.ಐ.ಸಿ. ಸಂಸ್ಥೆಯು ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳು ಖರೀದಿಸುವ ರೇಷ್ಮೆ ಸೀರೆ ಮತ್ತು ರೇಷ್ಮೆ ವಸ್ತ್ರಗಳಿಗೆ ಹೆಚ್ಚುವರಿ ಶೇ.5 ವಿಶೇಷ ರಿಯಾಯಿತಿ ನೀಡುತ್ತಿರುವ ಮಾದರಿಯಲ್ಲೇ ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ/ ನೌಕರರಿಗೂ ಹೆಚ್ಚುವರಿ ಶೇ. 5 ವಿಶೇಷ ರಿಯಾಯಿತಿ ನೀಡುವುದು.
ಈ ಸಭೆಯಲ್ಲಿಯೇ ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಅನುದಾನಿತ ಸಂಸ್ಥೆಗಳ ಅಧಿಕಾರಿ-ನೌಕರರು ಸ್ವಯಂ ಪ್ರೇರಣೆಯಿಂದ ಖಾದಿ ಬಟ್ಟೆಗಳನ್ನು ಧರಿಸುವ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅವರ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
- ಪ್ರತಿ ತಿಂಗಳ ಮೊದಲ ಶನಿವಾರದಂದು ಎಲ್ಲಾ ಅಧಿಕಾರಿ/ ನೌಕರರು ಖಾದಿ ಬಟ್ಟೆಗಳನ್ನು ಧರಿಸಿ ಕರ್ತವ್ಯ ನಿರ್ವಹಿಸುವುದು.
- ಸರ್ಕಾರಿ ಸ್ವಾಮ್ಯದ ಖಾದಿ ಗ್ರಾಮೋದ್ಯೋಗ ಮಂಡಳಿಯ ಮಳಿಗೆಗಳಲ್ಲಿ ಖಾದಿ ಬಟ್ಟೆಗಳನ್ನು ಖರೀದಿಸುವುದು.
- ಖಾದಿ ಗ್ರಾಮೋದ್ಯೋಗ ಮಂಡಳಿಯು ಹಾಲಿ ನೀಡುತ್ತಿರುವ ರಿಯಾಯಿತಿಯ ಹೊರತಾಗಿ ಅಧಿಕಾರಿ/ ನೌಕರರಿಗೆ ಶೇ. 5 ಹೆಚ್ಚುವರಿ ರಿಯಾಯಿತಿ ನೀಡುವುದು.
- ಪುರುಷ ನೌಕರರು ಖಾದಿ ಬಟ್ಟೆಯ ಶರ್ಟ್-ಪ್ಯಾಂಟ್/ ಒವರ್ ಕೋಟ್ ಹಾಗೂ ಇತರೆ ಶಿಸ್ತಿನ ಉಡುಗೆಗಳು.
- ಮಹಿಳಾ ನೌಕರರು ಖಾದಿ ಹಾಗೂ ಖಾದಿ ಸಿಲ್ಕ್ ಬಟ್ಟೆಯ ಸೀರೆ/ ಚೂಡಿದಾರ್ ಇತರೆ ಶಿಸ್ತಿನ ಉಡುಗೆಗಳು.
- ಈ ಉದ್ದೇಶಿತ ಈ ಯೋಜನೆಗೆ ಸರ್ಕಾರಿ ನೌಕರರ ದಿನಾಚರಣೆ 21-04-2026 ರಂದು ಚಾಲನೆ ನೀಡುವುದು.
ಸುತ್ತೋಲೆ ವಿವರ: ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಖಾದಿ ಬಟ್ಟೆ ಧರಿಸುವ ಕುರಿತು ಈಗಾಗಲೇ ಸುತ್ತೋಲೆಯನ್ನು ಹೊರಡಿಸಿದ್ದಾರೆ. ‘ಖಾದಿ’ ಕೇವಲ ಒಂದು ಉಡುಪು ಮಾತ್ರವಲ್ಲ, ಅದು ರಾಷ್ಟ್ರದ ಗೌರವ ಮತ್ತು ಹೆಮ್ಮೆಯ ಪ್ರತೀಕವಾಗಿದೆ. ಪ್ರಸ್ತುತ ಖಾದಿ ನೇಕಾರರು ನೂತನ ಶೈಲಿಯ ವಿನ್ಯಾಸದಲ್ಲಿ ಉಡುಪುಗಳನ್ನು ತಯಾರಿಸಲು ಮುಂದಾಗಿದ್ದಾರೆ.
ಅಲ್ಲದೇ, ಖಾದಿ ಉತ್ಪಾದನೆಯು ಗಾಮೀಣ ಆರ್ಥಿಕತೆಯ ಮೂಲ ಆಧಾರವಾಗಿದ್ದು, ರಾಜ್ಯದ ಸಾವಿರಾರು ಗ್ರಾಮೀಣ ನೂಲುಗಾರರು ಮತ್ತು ನೇಕಾರರಿಗೆ ನೇರ ಹಾಗೂ ಪರೋಕ್ಷವಾಗಿ ಜೀವನೋಪಾಯವನ್ನು ಒದಗಿಸುತ್ತಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಆದುದರಿಂದ, 77ನೇ ಗಣರಾಜೋತ್ಸವದ ಶುಭಸಂದರ್ಭದಲ್ಲಿ, ಸಾರ್ವಜನಿಕ ಸೇವೆಯನ್ನು ದೇಶದ ಸ್ವಾತಂತ್ರ್ಯ ಹೋರಾಟದೊಂದಿಗೆ ಮರುಸಂಪರ್ಕಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಖಾದಿ ಬಳಕೆಯನ್ನು ಉತ್ತೇಜಿಸಲು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.
ಅದರಂತೆ, ರಾಜ್ಯದ ಎಲ್ಲಾ ಸರ್ಕಾರಿ/ ಅನುದಾನಿತ ಸಂಸ್ಥೆಗಳು/ ನಿಗಮ/ ಮಂಡಳಿ/ ಸ್ವಾಯತ್ತ ಸಂಸ್ಥೆಗಳು/ ವಿಶ್ವವಿದ್ಯಾಲಯಗಳ ಅಧಿಕಾರಿ/ ನೌಕರರುಗಳು ಸ್ವಯಂ ಪ್ರೇರಣೆಯಿಂದ ಪ್ರತಿ ತಿಂಗಳ ಮೊದಲ ಶನಿವಾರದಂದು ಖಾದಿ ಉಡುಪನ್ನು ಧರಿಸುವುದು ಅಲ್ಲದೇ, ಸ್ವಾತಂತ್ರ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸೇರಿದಂತೆ ಎಲ್ಲಾ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಖಾದಿ ಉಡುಪನ್ನು ಧರಿಸುವಂತೆ ತಮ್ಮ ಇಲಾಖೆಗಳ ಅಧಿಕಾರಿ/ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲು ಕೋರಿದೆ ಎಂದು ಸೂಚಿಸಿದ್ದಾರೆ.

