ಮುಂಬೈ/ನ್ಯೂಯಾರ್ಕ್: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಐಐಟಿ ಪದವಿ ಪಡೆದು, ಅಮೆರಿಕದಲ್ಲಿ ನೆಲೆಸಿ, ಬ್ಯಾಂಕೊಂದರ ಡೈರೆಕ್ಟರ್ ಆಗಿ ಕೋಟಿಗಟ್ಟಲೆ ಸಂಬಳ ಪಡೆಯುವುದು ಬಹುತೇಕರ ಕನಸು. ಆದರೆ, ಈ ‘ಪರ್ಫೆಕ್ಟ್’ ಜೀವನವನ್ನೇ ಬದಿಗೊತ್ತಿ, ಕೈಯಲ್ಲಿ ಒಂದು ಬ್ಯಾಕ್ ಪ್ಯಾಕ್ ಹಿಡಿದು ಇಡೀ ವಿಶ್ವವನ್ನೇ ತಮ್ಮ ಮನೆಯನ್ನಾಗಿಸಿಕೊಂಡ ಸಾಧಕನೊಬ್ಬನ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಯಶಸ್ಸಿನ ನಡುವೆಯೂ ಕಾಡಿದ ಶೂನ್ಯತೆ: ‘ಹ್ಯೂಮನ್ಸ್ ಆಫ್ ಬಾಂಬೆ’ (Humans of Bombay) ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್‌ನಲ್ಲಿ, ಸದರಿ ವ್ಯಕ್ತಿ ತಮ್ಮ ಜೀವನದ ತಿರುವುಗಳನ್ನು ಬಿಚ್ಚಿಟ್ಟಿದ್ದಾರೆ. “2003ರಲ್ಲಿ ನಾನು ಐಐಟಿ ಪದವೀಧರನಾಗಿ ಅಮೆರಿಕದಲ್ಲಿ ನೆಲೆಸಿದ್ದೆ. 38ನೇ ವಯಸ್ಸಿಗೆ ಫಸ್ಟ್ ರಿಪಬ್ಲಿಕ್ ಬ್ಯಾಂಕ್‌ನಲ್ಲಿ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ಸಮಾಜದ ಕಣ್ಣಿಗೆ ನಾನು ಯಶಸ್ವಿ ವ್ಯಕ್ತಿ, ಆದರೆ ನನ್ನ ಆತ್ಮಕ್ಕೆ ಆ ಉದ್ಯೋಗ ತೃಪ್ತಿ ನೀಡುತ್ತಿರಲಿಲ್ಲ. ಹತ್ತು ವರ್ಷಗಳ ಕಾಲ ಕೇವಲ ಪದನಾಮಗಳ ಬೆನ್ನತ್ತಿ ನಾನು ಸುಸ್ತಾಗಿದ್ದೆ” ಎಂದು ಅವರು ಹೇಳಿಕೊಂಡಿದ್ದಾರೆ.
ಬದಲಾದ ಬದುಕು: 2013ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಇವರು, ತಮ್ಮ ಮನೆಯನ್ನು ಮಾರಿ ಕೇವಲ ಒಂದು ಬ್ಯಾಗ್‌ನೊಂದಿಗೆ ಪ್ರಪಂಚ ನೋಡಲು ಹೊರಟರು. 18 ತಿಂಗಳಲ್ಲಿ ರಷ್ಯಾದ ಪರ್ವತಗಳಿಂದ ಈಜಿಪ್ಟ್‌ನ ಮರುಭೂಮಿವರೆಗೆ 35 ದೇಶಗಳನ್ನು ಸುತ್ತಿದರು. ಈ ಪಯಣದ ವೇಳೆ ಮಾಂಟೆನೆಗ್ರೋದ ಹಾಸ್ಟೆಲ್ ಒಂದರಲ್ಲಿ ಅವರಿಗೆ ಕ್ಯಾಥಿ ಎಂಬ ಆಸ್ಟ್ರಿಯನ್ ಸಮಾಜ ಸೇವಕಿ ಪರಿಚಯವಾದರು. ಹತ್ತೇ ನಿಮಿಷದ ಮಾತುಕತೆ ಹತ್ತು ದಿನಗಳ ಒಡನಾಟಕ್ಕೆ ದಾರಿಯಾಗಿ, 2016ರಲ್ಲಿ ಇಬ್ಬರೂ ವಿವಾಹವಾದರು.
ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ: ವಿಶೇಷವೆಂದರೆ, ಈ ದಂಪತಿಗೆ ಈಗ ಮೂವರು ಮಕ್ಕಳಿದ್ದು, ಅವರು ಯಾವುದೇ ಶಾಲೆಗೆ ಹೋಗುತ್ತಿಲ್ಲ. ಪ್ರವಾಸದ ನಡುವೆಯೇ ಮಕ್ಕಳಿಗೆ ಮನೆಯಲ್ಲೇ ಶಿಕ್ಷಣ (Homeschooling) ನೀಡಲಾಗುತ್ತಿದೆ. ಭಾರತೀಯ ಮೂಲದ ಈ ವ್ಯಕ್ತಿ ತಮ್ಮ ಮಕ್ಕಳಿಗೆ ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮದ ಜೊತೆಗೆ ವೇದ ಮತ್ತು ಉಪನಿಷತ್ತುಗಳನ್ನು ಬೋಧಿಸುತ್ತಿದ್ದಾರೆ. ಭಾರತದಲ್ಲಿ ಮಾಡಿದ ಹೂಡಿಕೆಗಳ ಮೂಲಕ ಇವರ ಕುಟುಂಬ ಈಗ ವಿಶ್ವದ ವಿವಿಧ ದೇಶಗಳಲ್ಲಿ ಹೋಮ್‌ಸ್ಟೇಗಳಲ್ಲಿ ವಾಸಿಸುತ್ತಿದೆ.
“ಜನರು ನನ್ನ ಹಳೆಯ ಜೀವನದ ಭದ್ರತೆಯನ್ನು ಮಿಸ್ ಮಾಡಿಕೊಳ್ಳುತ್ತೀರಾ ಎಂದು ಕೇಳುತ್ತಾರೆ. ನಾನು ಒಂದು 4BHK ಮನೆಗೆ ಬದಲಾಗಿ ಇಡೀ ಪ್ರಪಂಚವನ್ನೇ ಪಡೆದುಕೊಂಡಿದ್ದೇನೆ. ನಾವು ರಾಜಾತಿಥ್ಯದ ಜೀವನ ನಡೆಸುತ್ತಿದ್ದೇವೆ” ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಈ ಪೋಸ್ಟ್ ಕಂಡ ನೆಟ್ಟಿಗರು, “ನಾವೆಲ್ಲರೂ ಕಾಣುವ ಕನಸನ್ನು ಇವರು ನನಸು ಮಾಡುತ್ತಿದ್ದಾರೆ” ಎಂದು ಶ್ಲಾಘಿಸುತ್ತಿದ್ದಾರೆ.

