ಬೆಂಗಳೂರು : ರಾಜ್ಯಾದ್ಯಂತ ಫೆಬ್ರವರಿ 28ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿದ್ದು, ಈ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶ್ನೆ ಪತ್ರಿಕೆ ಮಾರಾಟಕ್ಕಿದೆ ಎಂಬ ಕಿಡಿಗೇಡಿಗಳ ಪೋಸ್ಟ್ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.
‘ಡಾ. ಕನ್ನಡಿಗ’ ಎಂಬ ಹೆಸರಿನ ಖಾತೆಯಿಂದ “ಪ್ರಶ್ನೆ ಪತ್ರಿಕೆ ಬೇಕಿದ್ದರೆ ಮೆಸೇಜ್ ಮಾಡಿ” ಎಂದು ಬಹಿರಂಗವಾಗಿ ಆಮಿಷ ಒಡ್ಡಲಾಗುತ್ತಿದ್ದು, ಇಂತಹ ವಂಚಕ ಜಾಲಗಳ ಬಗ್ಗೆ ಜಾಗರೂಕರಾಗಿರುವಂತೆ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.
ನಕಲಿ ಪೋಸ್ಟ್ : ಇನ್‌ಸ್ಟಾಗ್ರಾಮ್‌ನಲ್ಲಿ ‘ಡಾ. ಕನ್ನಡಿಗ’ (Dr. Kannadiga) ಎಂಬ ಹೆಸರಿನ ಖಾತೆಯಿಂದ “ಪ್ರಶ್ನೆ ಪತ್ರಿಕೆ ಬೇಕಿದ್ದರೆ ಮೆಸೇಜ್ ಮಾಡಿ, ಹಣದ ಬಗ್ಗೆ ಆಮೇಲೆ ಚರ್ಚಿಸೋಣ” ಎಂಬ ಪೋಸ್ಟ್ ಹಾಕಲಾಗಿದೆ.ಇಂತಹ ಪೋಸ್ಟ್‌ಗಳು ಕೇವಲ ಹಣ ದೋಚುವ ಉದ್ದೇಶದಿಂದ ಕೂಡಿದ್ದು, ಇವು ನಕಲಿ ಅಥವಾ ಹಳೆಯ ಪ್ರಶ್ನೆ ಪತ್ರಿಕೆಗಳಾಗಿರಬಹುದು. ಇಂತಹ ಜಾಲಗಳಿಗೆ ಸಿಲುಕಿ ಹಣ ಕಳೆದುಕೊಳ್ಳಬೇಡಿ ಮತ್ತು ದಾರಿ ತಪ್ಪಬೇಡಿ ಎಂದು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ.
ಮೆಸೇಜ್’ ನಲ್ಲಿ ಏನಿದೆ..?
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಲರ್ಟ್, ನನಗೊಬ್ಬರು ಪ್ರಶ್ನೆಪತ್ರಿಕೆ ಕೊಡ್ತಿದ್ದಾರೆ. ನಾನು ಮಿಡಲ್ ಅಲ್ಲಿ ಏಜೆಂಟ್ ಆಗಿ ಕೆಲಸ ಮಾಡ್ತೇನೆ. ಪ್ರಶ್ನೆಪತ್ರಿಕೆ ಬೇಕು ಎಂದ್ರೆ ಮೆಸೇಜ್ ಮಾಡಿ, ಎಷ್ಟು ದುಡ್ಡು ಅಂತ ಹೇಳ್ತೇನೆ ಎಂದು ಮೆಸೇಜ್ ಮಾಡಿದ್ದಾನೆ.
ಹಿಂದಿನ ಘಟನೆ : ಇತ್ತೀಚೆಗೆ ಶಿವಮೊಗ್ಗದಲ್ಲಿ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಘಟನೆಯಿಂದಾಗಿ ಅಧಿಕಾರಿಗಳು ಈ ಬಾರಿ ಹೆಚ್ಚಿನ ಜಾಗೃತೆ ವಹಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸೂಚನೆ: ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುವ ಇಂತಹ ಸುಳ್ಳು ಸುದ್ದಿಗಳ ಬಗ್ಗೆ ಗಮನ ಹರಿಸದೆ, ಪರೀಕ್ಷೆಯ ಕಡೆಗೆ ಗಮನ ಹರಿಸುವಂತೆ ಸೂಚಿಸಲಾಗಿದೆ.ಹಣದಾಸೆಗೆ ಹಳೆಯ ಅಥವಾ ನಕಲಿ ಪ್ರಶ್ನೆ ಪತ್ರಿಕೆಗಳನ್ನು ತೋರಿಸಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಪ್ರಯತ್ನ ಇದಾಗಿದೆ.ಪರೀಕ್ಷಾ ಮಂಡಳಿಯು ಈ ಪೋಸ್ಟ್ ಬಗ್ಗೆ ತನಿಖೆ ನಡೆಸುತ್ತಿದ್ದು, ಯಾವುದೇ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಸೋಶಿಯಲ್ ಮೀಡಿಯಾ ವದಂತಿಗಳಿಗೆ ಕಿವಿಗೊಡದೆ ಪರೀಕ್ಷಾ ಸಿದ್ಧತೆಯ ಮೇಲೆ ಗಮನಹರಿಸಲು ಸೂಚಿಸಲಾಗಿದೆ.

