ಹೈದರಾಬಾದ್: ‘ಪೈರಸಿ ಕಿಂಗ್’ ಎಂದೇ ಕುಖ್ಯಾತಿ ಪಡೆದಿರುವ ಐಬೊಮ್ಮ ರವಿ 90 ದಿನಗಳ ಬಳಿಕ ಚಂಚಲಗೂಡ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಷರತ್ತುಬದ್ಧ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಸಿನಿಮಾ ಪೈರಸಿ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರಿಂದ ಬಂಧನಕ್ಕೀಡಾಗಿದ್ದ ರವಿ ಅಲಿಯಾಸ್ ಐಬೊಮ್ಮ ರವಿ ಚಂಚಲಗುಡಾಅ ಜೈಲು ಸೇರಿದ್ದ. ಇದೀಗ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಜೈಲಿನಿಂದ ಹೊರಬಂದಿದ್ದಾನೆ.
ಐಬೊಮ್ಮ ಸೇರಿದಂತೆ ಕೆಲವು ಪೈರಸಿ ವೆಬ್ಸೈಟ್ ಮತ್ತು ಅಪ್ಲಿಕೇಶನ್ಗಳನ್ನು ನಡೆಸುತ್ತದ್ದ ರವಿಯನ್ನು ಮೂರು ತಿಂಗಳ ಹಿಂದೆ ಪೊಲೀಸರು ಬಂದಿಸಿದ್ದರು. ಐಬೊಮ್ಮ ರವಿ ವಿರುದ್ಧ ಪೈರಸಿಯ ಹಲವಾರು ಕೇಸುಗಳು ದಾಖಲಾಗಿದ್ದವು. ವಿದೇಶದಲ್ಲಿ ಕೂತು ಪೈರಸಿ ವೆಬ್ಸೈಟ್ ನಡೆಸುತ್ತಿದ್ದ ರವಿ, ಕೌಟುಂಬಿಕ ಕಾರಣಗಳಿಗಾಗಿ ಹೈದರಾಬಾದ್ಗೆ ಬಂದಾಗ ಆತನನ್ನು ಪೊಲೀಸರು ಬಂಧಿಸಿದ್ದರು.
ರವಿ ಬಂಧನವಾಗಿ 90 ದಿನಗಳು ಕಳೆದರೂ ಪೊಲೀಸರು ರವಿ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿರಲಿಲ್ಲ. ಇದರ ಆಧಾರದ ಮೇಲೆ ಐಬೊಮ್ಮ ರವಿ ಜಾಮೀನು ಪಡೆದಿದ್ದಾನೆ. ಕೆಲವು ಕಠಿಣ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ ರವಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಪ್ರತಿ ದಿನವೂ ತನಿಖಾಧಿಕಾರಿ ಎದುರು ಹಾಜರಾಗಿ ಸಹಿ ಹಾಕುವುದು, ತನ್ನ ಪಾಸ್ಪೋರ್ಟ್ ಮತ್ತು ವಿಸಾಗಳನ್ನು ಪೊಲೀಸರಿಗೆ ಒಪ್ಪಿಸಬೇಕು, ದೇಶ ಬಿಟ್ಟು ಹೊರ ಹೋಗುವ ಪ್ರಯತ್ನ ಮಾಡುವಂತಿಲ್ಲ ಮತ್ತು ಪೈರಸಿ ವೆಬ್ಸೈಟ್ಗಳ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಐಬೊಮ್ಮ ರವಿ, ಸಾವಿರಾರು ಸಿನಿಮಾಗಳನ್ನು ಪೈರಸಿ ಮಾಡಿದ್ದ. ವಿದೇಶದಲ್ಲೇ ಕುಳಿತು ತನ್ನ ಐಬೊಮ್ಮ ಸೇರಿದಂತೆ ಹಲವು ವೆಬ್ಸೈಟ್ಗಳಿಗೆ ಉಚಿತವಾಗಿ ಸಿನಿಮಾಗಳನ್ನು ಅಪ್ಲೋಡ್ ಮಾಡುತ್ತಿದ್ದ. ಕೆಲವೊಮ್ಮೆ ಸಿನಿಮಾಗಳು ಬಿಡುಗಡೆ ಆಗುವ ಮುಂಚೆಯೇ ಅವುಗಳನ್ನು ವೆಬ್ಸೈಟ್ಗೆ ಅಪ್ಲೋಡ್ ಮಾಡುತ್ತಿದ್ದ, ತೆಲುಗು ಸಿನಿಮಾಗಳೇ ಹೆಚ್ಚಾಗಿ ಐಬೊಮ್ಮ ರವಿಯ ಟಾರ್ಗೆಟ್ ಆಗಿರುತ್ತಿದ್ದವು. ಐಬೊಮ್ಮ ರವಿಯಿಂದ ತೆಲುಗು ಚಿತ್ರರಂಗಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ. ತೆಲುಗು ಚಿತ್ರರಂಗದ ಹಲವು ನಿರ್ಮಾಣ ಸಂಸ್ಥೆಗಳು, ನಿರ್ಮಾಪಕರ ಸಂಘ, ಫಿಲಂ ಚೇಂಬರ್ಗಳು ರವಿ ವಿರುದ್ಧ ಹಲವು ಬಾರಿ ದೂರು ನೀಡಿದ್ದವು. ಬಂಧನಕ್ಕೀಡಾಗಿದ್ದ ಐಬೊಮ್ಮ ರವಿ ಜಾಮೀನು ಪಡೆದು ಬಿಡುಗಡೆಯಾಗಿದ್ದಾನೆ.

