ಹೈದರಾಬಾದ್: ಪ್ರೇಮಿಗಳು ಪರಸ್ಪರ ಉಡುಗೊರೆಗಳನ್ನು ಕೊಟ್ಟುಕೊಳ್ಳುವುದು ಸಾಮಾನ್ಯ. ಅದರಲ್ಲಿಯೂ ಪ್ರತಿಷ್ಠೆಗಾಗಿ ದುಬಾರಿ ಗಿಫ್ಟ್ ಗಳನ್ನು ಕೊಟ್ಟು ಮೆಚ್ಚುಗೆ ಪಡೆಯಲು ಏನೆಲ್ಲ ಸಾಹಸಗಳನ್ನು ಮಾಡುತ್ತಾರೆ. ಅದೇ ರೀತಿ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ದುಬಾರಿ ಗಿಫ್ಟ್ ನೀಡಲು ಬರೋಬ್ಬರಿ 2 ಲಕ್ಷ ರೂಪಾಯಿ ವಾಚ್ ಕದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಹೈದರಾಬಾದ್ ನ ಜುಬಿಲಿ ಹಿಲ್ಸ್‌ನಲ್ಲಿ ಈ ಘಟನೆ ನಡೆದಿದೆ. ಯುವತಿಯೊಬ್ಬಳು ಜುಬಿಲಿ ಹಿಲ್ಸ್ ನ ಐಷಾರಾಮಿ ಶೋರೂಮ್‌ನಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ವಾಚ್‌ಗಳನ್ನು ಕಳ್ಳತನ ಮಾಡಿದ್ದಾಳೆ. ವಾಚ್ ಕಲ್ಲತನ ಆರೋಪದಲ್ಲಿ 26 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ಆರೋಪಿ ಯುವತಿ ಜುಬಿಲಿ ಹಿಲ್ಸ್‌ನಲ್ಲಿರುವ ಪ್ರತಿಷ್ಠಿತ ವಾಚ್ ಶೋರೂಮ್‌ಗೆ ಗ್ರಾಹಕಿಯಂತೆ ಹೋಗಿದ್ದಾಳೆ. ತನಗೆ ಒಳ್ಳೆಯ ವಾಚ್‌ಗಳನ್ನು ತೋರಿಸುವಂತೆ ಸಿಬ್ಬಂದಿಯನ್ನು ಕೇಳಿದ್ದಾಳೆ. ಸಿಬ್ಬಂದಿ ವಿವಿಧ ಮಾದರಿಯ ವಾಚ್ ಗಳನ್ನು ತೋರಿಸುತ್ತಿದ್ದಾಗ, ಯಾರಿಗೂ ಸಂಶಯ ಬರದಂತೆ ಸುಮಾರು ತಲಾ 1 ಲಕ್ಷ ರೂಪಾಯಿ ಮೌಲ್ಯದ ಎರಡು ‘ಟಿಸ್ಸೋಟ್’ ವಾಚ್‌ಗಳನ್ನು ತನ್ನ ಬ್ಯಾಗ್‌ನಲ್ಲಿ ಅಡಗಿಸಿಟ್ಟುಕೊಂಡಿದ್ದಾಳೆ. ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ.
ವಾಚ್‌ಗಳು ನಾಪತ್ತೆಯಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ಶೋರೂಮ್ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಯುವತಿಯ ಕೈಚಳಕ ಬಯಲಾಗಿದೆ. ತಕ್ಷಣವೇ ಜುಬಿಲಿ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆಕೆ ಬಂದಿದ್ದ ಕಾರಿನ ನಂಬರ್ ಪ್ಲೇಟ್ ಆಧರಿಸಿ ಯುವತಿಯ ಜಾಡು ಹಿಡಿದಿದ್ದಾರೆ.
ಆರೋಪಿ ಯುವತಿ ಖಮ್ಮಂ ಜಿಲ್ಲೆಯಲ್ಲಿದ್ದಾಳೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಲ್ಲಿಗೆ ತೆರಳಿದ ಪೊಲೀಸ್ ತಂಡ ಯುವತಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನ್ನ ಪ್ರಿಯಕರನಿಗೆ ದುಬಾರಿ ಉಡುಗೊರೆ ನೀಡಲೆಂದು ವಾಚ್ ಕಳ್ಳತನ ಮಾಡಿದ್ದಾಗಿ ಯುವತಿ ಬಾಯ್ಬಿಟ್ಟಿದ್ದಾಳೆ. ಸದ್ಯ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದು, ಕಳ್ಳತನದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

