ಹೈದರಾಬಾದ್: ಮಧ್ಯರಾತ್ರಿ ನರ್ಸ್‌ವೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಬಳಿಕ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ಪಹಾಡಿಶರೀಫ್ ಪೊಲೀಸ್ ಠಾಣಾ ವ್ಯಾಪ್ತಿಯ ತುಕ್ಕುಗೂಡದಲ್ಲಿ ನಡೆದಿದೆ.
ತುಕ್ಕುಗೂಡದಲ್ಲಿರುವ ‘ಪ್ರೈಮ್ ಸೂಪರ್ ಸ್ಪೆಷಾಲಿಟಿ’ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ನರ್ಸ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಹಾಡಿಶರೀಫ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ಬೈಕ್ ಮೆಕ್ಯಾನಿಕ್ ಎಂಡಿ ಸನಾವುಲ್ಲಾ (35) ಎಂಬಾತನೇ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.
ಅತ್ಯಾಚಾರಕ್ಕೆ ಯತ್ನ.. ಪ್ರತಿರೋಧಿಸಿದ್ದಕ್ಕೆ ಸುತ್ತಿಗೆಯಿಂದ ದಾಳಿ
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಸನಾವುಲ್ಲಾ ತುಕ್ಕುಗೂಡದಲ್ಲಿದ್ದ ನರ್ಸ್ ಕೊಠಡಿಯ ಕಿಟಕಿಯ ಮೂಲಕ ಒಳನುಗ್ಗಿದ್ದಾನೆ. ಬಳಿಕ ಆಕೆಯ ಕತ್ತು ಹಿಸುಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ ನರ್ಸ್ತೀವ್ರವಾಗಿ ಪ್ರತಿರೋಧಿಸಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಆರೋಪಿ ಸುತ್ತಿಗೆಯಿಂದ ಶಿರೀಷಾ ಅವರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಆರಂಭದಲ್ಲಿ ಈ ಘಟನೆ ಆಸ್ಪತ್ರೆಯ ನರ್ಸ್‌ವೊಬ್ಬರ ಅನುಮಾನಾಸ್ಪದ ಸಾವು ಎಂದು ಬೆಳಕಿಗೆ ಬಂದಿತ್ತು. ಮಾಹಿತಿ ದೊರೆತ ಕೂಡಲೇ ಶಂಶಾಬಾದ್ ಡಿಸಿಪಿ ರಾಜೇಶ್ ಸೇರಿದಂತೆ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ ಸನಾವುಲ್ಲಾ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಕುಟುಂಬ, ಬಿಜೆಪಿ ನಾಯಕರಿಂದ ಪ್ರತಿಭಟನೆ
ಈ ಭೀಕರ ಘಟನೆಗೆ ಸಂತ್ರಸ್ತೆಯ ಕುಟುಂಬಸ್ಥರು ಹಾಗೂ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹತ್ಯೆ ಮಾಡಿದ ಆರೋಪಿ ಸನಾವುಲ್ಲಾನನ್ನು ಕೂಡಲೇ ಎನ್‌ಕೌಂಟರ್ ಮಾಡಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ನಿನ್ನೆ ಭಾರೀ ಪ್ರತಿಭಟನೆ ನಡೆಸಿದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

