ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಂದ ಹಿಡಿದು ನಗರಗಳವರೆಗೆ ಜನರ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವಿಶೇಷವಾಗಿ ನಗರಗಳಲ್ಲಿ ಇರುವ ಬ್ಯುಸಿ ಜೀವನದ ನಡುವೆ ಅಡುಗೆ ಮಾಡಲು ಸಮಯವಿಲ್ಲದ ಕಾರಣ ಅಥವಾ ಅಡುಗೆ ಮಾಡುವಷ್ಟು ಸಮಯ-ಆಸಕ್ತಿ ಇಲ್ಲದ ಕಾರಣ ಹೆಚ್ಚಿನವರು ಆನ್ಲೈನ್ ಫುಡ್ ಡೆಲಿವರಿ ಸೇವೆಗಳಿಗೆ ಹೆಚ್ಚು ಅವಲಂಬಿತರಾಗಿದ್ದಾರೆ.
ಆನ್ಲೈನ್ನಲ್ಲಿ ಏನೇ ಆರ್ಡರ್ ಮಾಡಿದರೂ ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪುತ್ತದೆ. ಆಹಾರದಿಂದ ಹಿಡಿದು ದಿನಸಿ ಸಾಮಗ್ರಿಗಳು, ಆಹಾರ ಪದಾರ್ಥಗಳು, ತರಕಾರಿಗಳವರೆಗೆ ಎಲ್ಲವನ್ನೂ ಆನ್ಲೈನ್ನಲ್ಲೇ ಆರ್ಡರ್ ಮಾಡುವುದು ಈಗ ಸಾಮಾನ್ಯವಾಗಿದೆ. ಜomato, Swiggy, Zepto, Uber Eats, Instamart, BigBasket ಸೇರಿದಂತೆ ಹಲವು ಆ್ಯಪ್ಗಳು ಗ್ರಾಹಕರಿಗೆ ಈ ಸೇವೆಗಳನ್ನು ಒದಗಿಸುತ್ತಿವೆ.
ಆದರೆ ಆನ್ಲೈನ್ನಲ್ಲಿ ಆಹಾರ ಆರ್ಡರ್ ಮಾಡುವಾಗ ಸಮಯಕ್ಕೆ ಸಿಕ್ಕಿತೇ, ರುಚಿಯಾಗಿದೆಯೇ ಎಂಬುದರ ಬಗ್ಗೆ ಗಮನ ಹರಿಸುವ ಗ್ರಾಹಕರು ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ನೀಡುವುದಿಲ್ಲ. ಇದೀಗ ಹೈದರಾಬಾದ್ನಲ್ಲಿ ನಡೆದಿರುವ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ ಆನ್ಲೈನ್ ಮೂಲಕ ಆಹಾರ ಮತ್ತು ದಿನಸಿ ಆರ್ಡರ್ ಮಾಡುವವರಿಗೆ ಎಚ್ಚರಿಕೆ ನೀಡುವಂತಿದೆ.
ಗೋದಾಮಿನ ಮೇಲೆ ದಿಢೀರ್ ದಾಳಿ
ಹೈದರಾಬಾದ್ನ ಪತ್ತರ್ಘಟ್ಟಿ ಪ್ರದೇಶದಲ್ಲಿರುವ ಪ್ರಮುಖ ಆನ್ಲೈನ್ ಡೆಲಿವರಿ ಸಂಸ್ಥೆ ‘ಇನ್ಸ್ಟಾಕಾರ್ಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್’ಗೆ ಸೇರಿದ ಗೋದಾಮಿನ ಮೇಲೆ ಆಹಾರ ಸುರಕ್ಷತಾ ಕಾರ್ಯಪಡೆ ಅಧಿಕಾರಿಗಳು ಬುಧವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ಆಹಾರ ಪದಾರ್ಥಗಳ ಸ್ಥಿತಿ ಕಂಡು ಅಧಿಕಾರಿಗಳೇ ಅಚ್ಚರಿಗೊಳಗಾಗಿದ್ದಾರೆ. ಭಾರೀ ಪ್ರಮಾಣದಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ.
ಈ ಗೋದಾಮಿನಲ್ಲಿ ಈಗಾಗಲೇ ಕತ್ತರಿಸಿ ಇಟ್ಟಿದ್ದ ಹಣ್ಣುಗಳು, ID ಇಡ್ಲಿ-ದೋಸೆ ಹಿಟ್ಟು, Happilo ಕಾಜು ಹಾಗೂ Nandini ತುಪ್ಪ ಸೇರಿದಂತೆ ಅವಧಿ ಮೀರಿದ ಹಲವು ಆಹಾರ ಪದಾರ್ಥಗಳು ಪತ್ತೆಯಾಗಿವೆ.
ಕೊಳೆತ ತರಕಾರಿ, ಲೀಕ್ ಆಗುತ್ತಿದ್ದ ಹಾಲಿನ ಪ್ಯಾಕೆಟ್ಗಳು
ಅಷ್ಟೇ ಅಲ್ಲದೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿರುವುದು ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ. ಗೋದಾಮಿನಲ್ಲಿ ಈಗಾಗಲೇ ಕೊಳೆತುಹೋಗಿದ್ದ ಬದನೆಕಾಯಿ ಸೇರಿದಂತೆ ಹಲವು ತರಕಾರಿಗಳು ಪತ್ತೆಯಾಗಿವೆ.
ಇದಲ್ಲದೆ, ಸೋರಿಕೆಯಾಗುತ್ತಿದ್ದ ಹಾಗೂ ಕೊಳಕಿನಿಂದ ಕೂಡಿದ್ದ ಹಾಲಿನ ಪ್ಯಾಕೆಟ್ಗಳು ಮತ್ತು ಉಬ್ಬಿಕೊಂಡಿದ್ದ ಟೆಟ್ರಾ ಪ್ಯಾಕ್ಗಳೂ ಕಂಡುಬಂದಿವೆ.ಫ್ರಿಜ್ನಲ್ಲಿದ್ದ ಕೆಲವು ಚೀಸ್, ಹಾಲು ಮತ್ತು ಐಸ್ಕ್ರೀಂಗಳು ಕರಗಿ ಸೋರಿಕೆಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಚ್ಛತೆಯಲ್ಲೂ ನಿರ್ಲಕ್ಷ್ಯ
ಗೋದಾಮಿನಲ್ಲಿ ಕನಿಷ್ಠ ಮಟ್ಟದ ಸ್ವಚ್ಛತೆಯನ್ನೂ ಕಾಪಾಡದಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಅಲ್ಲದೆ, ಗೋದಾಮಿನ ಆವರಣವನ್ನು ಸ್ವಚ್ಛಗೊಳಿಸಿರುವ ಬಗ್ಗೆ ಯಾವುದೇ ದಾಖಲೆಗಳನ್ನು ನಿರ್ವಹಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತ್ತೆಯಾದ ಅವಧಿ ಮೀರಿದ ಹಾಗೂ ಹಾಳಾಗಿದ್ದ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಸ್ಥಳದಲ್ಲೇ ನಾಶಪಡಿಸಿದ್ದಾರೆ. ಜೊತೆಗೆ, ಸಂಸ್ಥೆಯ ಆಹಾರ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿಗಳು ತಿಳಿಸಿದ್ದಾರೆ.
ಆನ್ಲೈನ್ನಲ್ಲಿ ಆಹಾರ, ಹಣ್ಣು, ತರಕಾರಿ ಅಥವಾ ದಿನಸಿ ಸಾಮಗ್ರಿಗಳನ್ನು ಆರ್ಡರ್ ಮಾಡುವ ಗ್ರಾಹಕರು ಉತ್ಪನ್ನದ ಅವಧಿ ದಿನಾಂಕ, ಪ್ಯಾಕಿಂಗ್ ಮತ್ತು ಗುಣಮಟ್ಟವನ್ನು ಪರಿಶೀಲಿಸುವುದು ಅತ್ಯಂತ ಮುಖ್ಯವಾಗಿದೆ.

