ಭೋಪಾಲ್: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆಗೈದು ಬಳಿಕ ದರೋಡೆಕೋರರ ಕೃತ್ಯ ಎಂದು ಕಥೆ ಕಟ್ಟಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪುರೋಹಿತ್ ದೇವಕೃಷ್ಣ (28) ಎಂಬುವವರ ಮೃತದೇಹ ಮನೆಯಲ್ಲಿ ಪತ್ತೆಯಾಗಿತ್ತು. ಹರಿತವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು. ದರೋಡೆಕೋರರು ಮನೆಗೆ ನುಗ್ಗಿ 3.5 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳುವು ಮಡಲು ಯತ್ನಿಸಿದ್ದರು. ಅದನ್ನು ತಡೆಯಲು ಮುಂದಾದ ನನ್ನ ಪತಿಯನ್ನು ದರೋಡೆಕೋರರು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಪತ್ನಿ ಪ್ರಿಯಾಂಕಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.
ಆದರೆ ದೇವಕೃಷ್ಣ ಅವರ ಸಹೋದರ ಕೊಲೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ತನ್ನ ಸಹೋದರನ ದಾಂಪತ್ಯದಲ್ಲಿ ಎಲ್ಲವೂ ಸರಿ ಇರಲಿಲ್ಲ. ಪ್ರಿಯಾಂಕಾ ಆಗಾಗ್ಗೆ ತನ್ನ ಅಣ್ಣನನ್ನು ಅವಮಾನಿಸುತ್ತಿದ್ದಳು. ನೀವು ನನಗೆ ಅರ್ಹವಾದವರಲ್ಲ ಎನ್ನುತ್ತಿದ್ದಳು ಎಂದು ದೂರಿದ್ದರು.
ತನಿಖೆ ನಡೆಸಿದ ಪೊಲೀಸರಿಗೆ ಇದೊಂದು ಕೊಲೆ ಎಂಬುದು ಖಚಿತವಾಗಿದೆ. ಕಮಲೇಶ್ ಪುರೋಹಿತ್ ಹಾಗೂ ಪ್ರಿಯಾಂಕಾ ಪರಸ್ಪರ ಪ್ರೀತಿಸುತ್ತಿದ್ದರು. ಇದೇ ಕಾರಣಕಕಗಿ ಪ್ರಿಯಾಂಕಾ ಕಮಲೇಶ್ ಜೊತೆ ಸೇರಿ ಪತಿ ದೇವಕೃಷ್ಣನನ್ನು ಕೊಲೆ ಮಾಡಿಸಿದ್ದಳು.
ಕಮಲೇಶ್ ಸುರೇಂದ್ರ ಭಾಟಿ ಎಂಬಾತನಿಗೆ ದೇವಕೃಷ್ಣನನ್ನು ಕೊಲ್ಲಲು 1 ಲಕ್ಷ ರೂಪಾಯಿ ಒಪ್ಪಂದ ಮಾಡಿಕೊಂಡಿದ್ದ. ಮುಂಗಡವಾಗಿ 50ಸಾವಿರ ಹಣ ನೀಡಿದ್ದ. ಕೊಲೆಯಾದ ರಾತ್ರಿ ದೇವಕೃಷ್ಣ ಮನೆಯನ್ನು ಉದ್ದೇಶಪೂರ್ವಕವಾಗಿ ಲಾಕ್ ಮಾಡದೇ ತೆರೆದಿಡಲಾಗಿತ್ತು. ಸುಪಾರಿ ಪಡೆದಿದ್ದ ಸುರೇಂದ್ರ ಮನೆಗೆ ನುಗ್ಗಿ ದೇವಕೃಷ್ಣನನ್ನು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ. ದರೋಡೆಕೋರರ ಕೃತ್ಯ ಎಂದು ಬಿಂಬಿಸಲು ಮನೆಯಲ್ಲಿದ್ದ ಹಣ, ಚಿನ್ನಾಭರಣಗಳನ್ನು ಅಡಗಿಸಿಡಲಾಗಿತ್ತು. ಪೊಲೀಸರು ಮನೆಯಲ್ಲಿ ಶೋಧ ನಡೆಸಿದಾಗ ನಾಪತ್ತೆಯಾಗಿದ್ದ ಹಣ, ಚಿನ್ನಾಭರಣಗಳು ಪತ್ತೆಯಾಗಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಕೃಷ್ಣ ಪತ್ನಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಕಮಲೇಶ್ ಪುರೋಹಿತ್ ನನ್ನು ಬಂಧಿಸಲಾಗಿದೆ.

