ವಿಮಾನದ ಒಳಗೆ ಪತಿಯೊಬ್ಬ ತನ್ನ ಪತ್ನಿಯ ವಿಷಯವಾಗಿ ಪರಪುರುಷರೊಂದಿಗೆ ಜಗಳವಾಡಿ, ಅಂತಿಮವಾಗಿ ವಿಮಾನದಿಂದಲೇ ಹೊರಹಾಕಲ್ಪಟ್ಟ ವಿಚಿತ್ರ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಪತ್ನಿ ಬೇರೊಬ್ಬ ಪ್ರಯಾಣಿಕನೊಂದಿಗೆ ಮಾತನಾಡಿದ್ದನ್ನು ಸಹಿಸದ ಪತಿ ವಿಮಾನದ ಒಳಗೇ ರಂಪಾಟ ಮಾಡಿದ್ದಾನೆ.
ನಡೆದಿದ್ದೇನು? ವೈರಲ್ ಆಗಿರುವ ವಿಡಿಯೋ ಪ್ರಕಾರ, ವಿಮಾನದಲ್ಲಿ ಪತಿ ಮತ್ತು ಪತ್ನಿ ಬೇರೆ ಬೇರೆ ಸೀಟುಗಳಲ್ಲಿ ಕುಳಿತಿದ್ದರು. ಈ ವೇಳೆ ಪತ್ನಿ ತನ್ನ ಪಕ್ಕದ ಸೀಟಿನಲ್ಲಿದ್ದ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವುದನ್ನು ಗಮನಿಸಿದ ಪತಿ ಸಿಟ್ಟಿನಿಂದ ಕೆಂಡಾಮಂಡಲವಾಗಿದ್ದಾನೆ. ಅಸೂಯೆಯಿಂದ ಶುರುವಾದ ಈ ಕಿರಿಕ್ ನೋಡನೋಡುತ್ತಿದ್ದಂತೆ ದೊಡ್ಡ ಜಗಳಕ್ಕೆ ಕಾರಣವಾಗಿದೆ. ವಿಮಾನದ ಸಿಬ್ಬಂದಿ ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಆತ ಇತರ ಪ್ರಯಾಣಿಕರ ಮೇಲೂ ಆಕ್ರೋಶ ಹೊರಹಾಕಿದ್ದಾನೆ.
ಜಗಳ ವಿಕೋಪಕ್ಕೆ ಹೋದಾಗ ಸಹಪ್ರಯಾಣಿಕರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲು ಆರಂಭಿಸಿದರು. ಇದರಿಂದ ಮತ್ತಷ್ಟು ಕೆರಳಿದ ವ್ಯಕ್ತಿ, ತನ್ನ ಕೈಯಲ್ಲಿದ್ದ ಫ್ರೆಂಚ್ ಫ್ರೈಸ್ ಪ್ಯಾಕೆಟ್ ಅನ್ನು ವಿಡಿಯೋ ಮಾಡುತ್ತಿದ್ದ ಪ್ರಯಾಣಿಕರ ಮೇಲೆ ಎಸೆದಿದ್ದಾನೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ವಿಮಾನದ ಸಿಬ್ಬಂದಿ ಮತ್ತು ನೆಲದ ಮೇಲಿನ ಭದ್ರತಾ ಸಿಬ್ಬಂದಿ ತಕ್ಷಣವೇ ಮಧ್ಯಪ್ರವೇಶಿಸಿ ಆತನನ್ನು ವಿಮಾನದಿಂದ ಕೆಳಕ್ಕೆ ಇಳಿಸಿದ್ದಾರೆ.
ನೆಟ್ಟಿಗರ ಆಕ್ರೋಶ ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಜನ ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. “ಇಷ್ಟು ಅಸೂಯೆ ಇರುವ ವ್ಯಕ್ತಿ ಸಾರ್ವಜನಿಕವಾಗಿ ವರ್ತಿಸುವುದನ್ನು ಕಲಿಯಬೇಕು” ಎಂದು ಕೆಲವರು ಟೀಕಿಸಿದರೆ, ಇನ್ನು ಕೆಲವರು “ಆತನನ್ನು ನೋ ಫ್ಲೈ ಲಿಸ್ಟ್‌ಗೆ ಸೇರಿಸಿ, ವಿಮಾನಯಾನದಿಂದಲೇ ನಿಷೇಧಿಸಿ” ಎಂದು ಆಗ್ರಹಿಸಿದ್ದಾರೆ. ಆದರೆ ವಿಮಾನದಲ್ಲಿದ್ದ ಇತರ ಪ್ರಯಾಣಿಕರು ಆತನನ್ನು ನೋಡಿ ನಗುತ್ತಾ, ವಿಡಿಯೋ ಮಾಡುತ್ತಾ ಆತನನ್ನು ಮತ್ತಷ್ಟು ಪ್ರಚೋದಿಸಿದರು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಮೂಲಗಳ ಪ್ರಕಾರ, ವಿಮಾನದಲ್ಲಿ ಸೀಟುಗಳು ಲಭ್ಯವಿಲ್ಲದ ಕಾರಣ ಪತಿ-ಪತ್ನಿ ದೂರದ ಸೀಟುಗಳಲ್ಲಿ ಕುಳಿತುಕೊಳ್ಳಬೇಕಾಯಿತು. ಆದರೆ ಪತ್ನಿ ಅಪರಿಚಿತನೊಂದಿಗೆ ಮಾತನಾಡುತ್ತಿರುವುದು ಪತಿಗೆ ಅರಗಿಸಿಕೊಳ್ಳಲಾಗದೆ ಈ ರಾದ್ಧಾಂತ ನಡೆದಿದೆ ಎನ್ನಲಾಗಿದೆ.

