ಬೆಂಗಳೂರು: ಹುಬ್ಬಳ್ಳಿಯಲ್ಲಿ ದಲಿತ ಮಹಿಳೆಯನ್ನು ವಿವಸ್ತ್ರ ಗೊಳಿಸಿ ಹಲ್ಲೆ ನಡೆಸಲಾಗಿದ್ದು, ಇದು ಅತ್ಯಂತ ಅಮಾನವೀಯ ಹಾಗೂ ಖಂಡನೀಯ. ಪ್ರಕರಣವನ್ನು ಮುಚ್ಚಿಹಾಕಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸಂಸದ ಬೊಮ್ಮಾಯಿ, ಲಂಗು ಲಗಾಮು ಇಲ್ಲದೆ ಪೊಲೀಸ್ ಇಲಾಖೆ ನಡೆಯುತ್ತಿದೆ. ಕೂಡಲೆ ಹುಬ್ಬಳ್ಳಿ ಧಾರವಾಡ ಪೊಲಿಸ್ ಕಮಿಷನರ್ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಮಹಿಳೆಯ ವಿವಸ್ತ್ರ ಗೊಳಿಸಿರುವ ಪ್ರಕರಣ ಅತ್ಯಂತ ಕ್ರೂರವಾದದ್ದು. ಅದು ಪೊಲಿಸ್ ಇಲಾಖೆಯಿಂದ ನಡೆದಿರುವುದು ಈ ರಾಜ್ಯದಲ್ಲಿ ಗೃಹ ಇಲಾಖೆ ಸಂಪೂರ್ಣ ಹಿಡಿತ ಕಳೆದುಕೊಂಡಿದೆ ಎಂಬುದನ್ನು ತೋರಿಸುತ್ತಿದೆ. ಗೃಹ ಇಲಾಖೆ ಹದಗೆಟ್ಟಿದೆ, ಯಾರು ರಕ್ಷಕರಿದ್ದಾರೆ ಅವರು ಭಕ್ಷಕರಾಗಿದ್ದಾರೆ. ಬೆಲಿ ಎದ್ದು ಹೊಲ ಮೇಯ್ದಿದೆ. ಒಬ್ಬ ಮಹಿಳೆಗೆ ರಕ್ಷಣೆ ಬದಲಿಗೆ ವಿವಸ್ತ್ರಗೊಳಿಸುವ ಕೆಲಸ ಮಾಡಿದವರು ಸಮಾಜದಲ್ಲಿ ತಲೆ ಎತ್ತಲು ನಾಲಾಯಕ್ . ಘಟನೆ ಹೊರ ಬಂದ ನಂತರ ಕಮಿಷನರ್ ಪ್ರಕರಣ ಮುಚ್ಚಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಕಾರ್ಪೊರೇಟ್ ರ ದೂರಿನ ಹಿನ್ನಲೆಯಲ್ಲಿ ಆರೆಸ್ಟ್ ಮಾಡಿದ್ದಾರೆ. ಏನಾದರೂ ಸಮಸ್ಯೆಯಾಗಿದ್ದರೆ ಬಿಎಲ್ ಒ ಕಂಪ್ಲೆಂಟ್ ಮಾಡಬೆಕಿತ್ತು. ಕಾಂಗ್ರೆಸ್ ಪಕ್ಷದ ಅಣತಿಯಂತೆ ಕಾನೂನು ಬಾಹಿರ ಬಂಧನ ನಡೆದಿದೆ. ಕಮಿಷನರ್ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿರುವುದು ಕ್ರಿಮಿನಲ್ ಅಪರಾಧ, ಕಮಿಷನರ್ ತನ್ನನ್ನು ತಾನು ಬಹಳ ಬುದ್ಧಿವಂತ ಅಂದುಕೊಂಡಿದ್ದಾರೆ. ತಾವು ಏನು ಬೇಕಾದರು ಮಾಡಿದರೂ ನಡೆಯುತ್ತೆ ಅಂತ ಅಂದುಕೊಂಡಿದ್ದಾರೆ. ಇವರಿಗೆ ಯಾರ ಬೆಂಬಲ ಇದೆ. ಈ ಪ್ರಕರಣದಲ್ಲಿ ಇನ್ಸಪೆಕ್ಟರ ವರ್ಗಾವಣೆ ಆಗಿದೆ. ಆದರೆ, ನೇರವಾಗಿ ಭಾಗಿಯಾಗಿರುವ ಕಾನ್ಸ್ ಟೇಬಲ್ ಮೇಲೆ ಯಾವುದೇ ಕ್ರಮ ಇಲ್ಲ. ಒಂದೆಡೆ ಆಗಿರುವ ಘಟನೆ ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಪ್ರಕರಣದಲ್ಲಿ ಭಾಗಿಯಾದವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಬಳ್ಳಾರಿಯಲ್ಲಿ ಘಟನೆ ನಡೆದ ತಕ್ಷಣ ಎಸ್ಪಿ ಅಮಾನತು ಮಾಡಿದ್ದಾರೆ. ಆದರೆ, ಹುಬ್ಬಳ್ಳಿ ಪ್ರಕರಣದಲ್ಲಿ ಸರ್ಕಾರ ಹಿರಿಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ದುಡ್ಡು ಕೊಟ್ಟವರ ರಕ್ಷಣೆ ಮಾಡುತ್ತಾರೆ. ಈ ಸರ್ಕಾರದಲ್ಲಿ ದ್ವಿಮುಖ ನೀತಿ ನಡೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ಅಣತಿಯಂತೆ ಪೊಲೀಸರು ನಡೆಯುತ್ತಿದ್ದಾರೆ ಎಂದು ಆರೋಪಿಸಿದರು.

