ಅಭಿಮಾನಿಗಳ ಪಾಲಿನ ಸಾಹಸಸಿಂಹ ಡಾ.ವಿಷ್ಣುವರ್ಧನ್ ಹೆಸರನ್ನು ರಾಜ್ಯದ ಪ್ರಮುಖ ಬಸ್ ನಿಲ್ದಾಣವೊಂದಕ್ಕೆ ಇಡಲಾಗುತ್ತದೆ. ಹೌದು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆಯಲಾಗಿದೆ.
ಹೆಚ್.ಎಂ.ರೇವಣ್ಣ ಅಧ್ಯಕ್ಷರು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ ಸಿಎಂ ಸಿದ್ಧರಾಮಯ್ಯ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರ ಹುಬ್ಬಳ್ಳಿಯ 4 ಪ್ರಮುಖ ಬಸ್ ನಿಲ್ದಾಣಗಳಿಗೆ ಮಹನೀಯರ ಹೆಸರನ್ನು ನಾಮಕರಣ ಮಾಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಉತ್ತರ ಕರ್ನಾಟಕದ ಸಾಂಸ್ಕೃತಿಕ ಕೇಂದ್ರವಾದ ಹುಬ್ಬಳ್ಳಿಯ ಇತಿಹಾಸ ಮತ್ತು ಕನ್ನಡ ನಾಡಿನ ಅಸ್ಮಿತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ, ನಗರದ ಪ್ರಮುಖ 4 ಬಸ್ ನಿಲ್ದಾಣಗಳಿಗೆ ಕೆಳಕಂಡ ಸಾಧಕರ ಹೆಸರನ್ನು ನಾಮಕರಣ ಮಾಡಬೇಕೆಂದು ಈ ಮೂಲಕ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
- ಹುಬ್ಬಳ್ಳಿ ಹಳೆಯ ಕೇಂದ್ರ ಬಸ್ ನಿಲ್ದಾಣ (ಚೆನ್ನಮ್ಮ ವೃತ್ತ). ಗೋಕಾಕ್ ಚಳುವಳಿಯ ಧೀಮಂತ ನಾಯಕ, ‘ಕರ್ನಾಟಕ ರತ್ನ’ ಡಾ. ರಾಜ್‌ಕುಮಾರ್ ಬಸ್ ನಿಲ್ದಾಣ.
- ಹುಬ್ಬಳ್ಳಿ ಗೋಕುಲ ರಸ್ತೆ ಬಸ್ ನಿಲ್ದಾಣ. ಅಪ್ರತಿಮ ಸ್ವಾತಂತ್ರ ಹೋರಾಟಗಾರ ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಬಸ್ ನಿಲ್ದಾಣ.
- ಹುಬ್ಬಳ್ಳಿ ಹೊಸೂರು ಬಸ್ ನಿಲ್ದಾಣ. ಯುವಜನತೆಯ ಸ್ಪೂರ್ತಿ. ‘ಕರ್ನಾಟಕ ರತ್ನ’ ಪುನೀತ್ ರಾಜ್‌ಕುಮಾರ್ ಬಸ್ ನಿಲ್ದಾಣ.
- ಹುಬ್ಬಳ್ಳಿ ಸಿಟಿ ಬಸ್ ನಿಲ್ದಾಣ (CBT). ಕನ್ನಡ ಚಿತ್ರರಂಗದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಬಸ್ ನಿಲ್ದಾಣ.
ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಈ ಮಹನೀಯರ ಹೆಸರನ್ನು ಹುಬ್ಬಳ್ಳಿಯ 4, ಪ್ರಮುಖ ಬಸ್ ನಿಲ್ದಾಣಗಳಿಗೆ ಇಡುವ ಮೂಲಕ ಅವರಿಗೆ ಗೌರವ ಸಲ್ಲಿಸುವುದು ಸಮಸ್ತ ಕನ್ನಡಿಗರ ಆಶಯವಾಗಿದೆ.
ಆದ್ದರಿಂದ ಈ ಕುರಿತು ಅಧಿಕೃತ ಘೋಷಣೆ ಮಾಡಬೇಕೆಂದು ತಮ್ಮನ್ನು ಈ ಮೂಲಕ ಕೋರುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

