ವಿಜಯಪುರ: ಹನಿಟ್ರ್ಯಾಪ್ ಮೂಲಕ ಸಹೋದ್ಯೋಗಿಯನ್ನೇ ಕಿಡ್ನ್ಯಾಪ್ ಮಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಕಿಡ್ನ್ಯಾಪ್ ಮಾಡಿ ಬರೋಬ್ಬರಿ 12 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದರು ದುರುಳರು.
ಪ್ರಕರಣ ಸಂಬಂಧ ಅಂತರ-ಜಿಲ್ಲಾ ಅಪಹರಣಕಾರರ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ನಗರದ ಕಸ್ತೂರಿ ಕಾಲೋನಿಯ ನಿವಾಸಿ 22 ವರ್ಷದ ಸಾಹಿಲ್‌ನನ್ನು ಜೂನ್ 18ರಂದು ಕಾಣೆಯಾಗಿದ್ದ. ಯಾರೋ ದುಷ್ಕರ್ಮಿಗಳು ತನ್ನ ಮಗನನ್ನು ಅಪಹರಿಸಿದ್ದಾರೆ ಎಂದು ಮಮ್ತಾಜ್ ಜೂ.19ರಂದು ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ. ಅಪಹರಣಕ್ಕೊಳಗಾದ ಸಾಹಿಲ್ ಮತ್ತು ಆರೋಪಿ ಮಹ್ಮಮದ ರಫೀಕ್ ಇಬ್ಬರೂ ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಸಾಹಿಲ್ ಕುಟುಂಬವು ಇತ್ತೀಚೆಗಷ್ಟೇ ತಮಗೆ ಸೇರಿದ 2 ಎಕರೆ ಜಮೀನನ್ನು 26 ಲಕ್ಷ ರೂ.ಗೆ ಮಾರಾಟ ಮಾಡಿತ್ತು. ಸಾಹಿಲ್ ಈ ವಿಷಯವನ್ನು ತನ್ನ ಸಹೋದ್ಯೋಗಿ ಮಹ್ಮಮದ ರಫೀಕ್ ಬಳಿ ಹಂಚಿಕೊಂಡಿದ್ದನು.
ಹಣದ ಸುಳಿವು ಸಿಗುತ್ತಿದ್ದಂತೆ ರಫೀಕ್, ಈ ವಿಷಯವನ್ನು ತನ್ನ ಸ್ನೇಹಿತ ಗೋಪಾಲ ಎಂಬಾತನಿಗೆ ತಿಳಿಸಿ, ಬಳಿಕ ಸಾಹಿಲ್‌ನನ್ನು ಹನಿಟ್ರ‍್ಯಾಪ್ ಮೂಲಕ ಅಪಹರಿಸಿದ್ರು. ಹಣ ವಸೂಲಿ ಮಾಡಲು ಇಬ್ಬರೂ ಸೇರಿ ಒಳಸಂಚು ರೂಪಿಸಿದ್ದರು.
ಆರೋಪಿಗಳು ವಿಜಯಪುರದ ಯುವತಿಯನ್ನು ಸಂಪರ್ಕಿಸಿ ಹನಿಟ್ರ್ಯಾಪ್‌ಗೆ ಒಪ್ಪಿಸಿದ್ದರು. ಯುವತಿ ಮೂಲಕ ಸಾಹಿಲ್‌ಗೆ ಪರಿಚಯ ಮಾಡಿಸಿ ಸ್ನೇಹ ಬೆಳೆಸಿದ್ರು. ಜೂನ್ 18ರಂದು ರಾತ್ರಿ 8 ಗಂಟೆ ಸುಮಾರಿಗೆ ಯುವತಿ ಸಾಹಿಲ್‌ಗೆ ಫೋನ್ ಮಾಡಿ ಸರ್ಕಾರಿ ಆಸ್ಪತ್ರೆ ಹಿಂಭಾಗದ ಖಾಲಿ ಜಾಗಕ್ಕೆ ಬರುವಂತೆ ತಿಳಿಸಿದ್ದಳು. ಆಕೆ ಹೇಳಿದ ಜಾಗಕ್ಕೆ ಸಾಹಿಲ್ ಬರುತ್ತಿದ್ದಂತೆ, ಅಲ್ಲಿ ಹೊಂಚು ಹಾಕಿ ಕುಳಿತಿದ್ದ ಗೋಪಾಲ ಮತ್ತು ಆತನ ಗ್ಯಾಂಗ್ ಸಾಹಿಲ್‌ನನ್ನು ಸ್ಕಾರ್ಪಿಯೋದಲ್ಲಿ ಅಪಹರಿಸಿದ್ದರು. ಅಪಹರಣಕಾರರು ಸಾಹಿಲ್‌ನನ್ನು ವಿಜಯಪುರದಿಂದ ಗದಗ, ಗೋವಾ ಮಾರ್ಗವಾಗಿ ಕರೆದೊಯ್ದಿದ್ದರು. ದಾರಿಯ ಮಧ್ಯೆ ಸಾಹಿಲ್ ಮೊಬೈಲ್‌ನಿಂದಲೇ ಆತನ ತಾಯಿಗೆ ಕರೆ ಮಾಡಿ 12 ಲಕ್ಷ ರೂ. ನೀಡಬೇಕು ಎಂದು ಬೆದರಿಕೆ ಹಾಕಿದ್ದರು.
ಇದರಿಂದ ಕಂಗಾಲಾದ ಸಾಹಿಲ್ ಪೋಷಕರು, ಗಾಂಧಿಚೌಕ್ ಠಾಣೆಯಲ್ಲಿ ದೂರು ನೀಡಿದ್ದರು. ಗಾಂಧಿಚೌಕ್ ಠಾಣೆಯ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಮೊಬೈಲ್ ಕರೆಗಳ ನೆಟ್‌ವರ್ಕ್ ಆಧರಿಸಿ ಆರೋಪಿಗಳಿನ್ನು ಬಂಧಿಸಿದ್ದಾರೆ.
8 ಜನ ಆರೋಪಿಗಳನ್ನು ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೋ ಹಾಗೂ 7 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.

