HomeLatest Newsಹೋಂಸ್ಟೇ ನೋಂದಣಿ ಕಡ್ಡಾಯ: ಕನಿಷ್ಠ ಮಾನದಂಡಗಳನ್ನು ಪೂರೈಸದ ಹೋಂಸ್ಟೇಗಳಿಗೆ ಮಾನ್ಯತೆ ಇಲ್ಲ: ಪ್ರವಾಸೋದ್ಯಮ ಇಲಾಖೆಯ ಆಯುಕ್ತರಾದ...

ಹೋಂಸ್ಟೇ ನೋಂದಣಿ ಕಡ್ಡಾಯ: ಕನಿಷ್ಠ ಮಾನದಂಡಗಳನ್ನು ಪೂರೈಸದ ಹೋಂಸ್ಟೇಗಳಿಗೆ ಮಾನ್ಯತೆ ಇಲ್ಲ: ಪ್ರವಾಸೋದ್ಯಮ ಇಲಾಖೆಯ ಆಯುಕ್ತರಾದ ಡಾ.ರಾಮ್‌ ಪ್ರಸಾತ್‌ ಮನೋಹರ್‌ ಖಡಕ್ ಆದೇಶ

ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಂದು ಹೋಂ ಸ್ಟೇಗಳೂ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಇದುವರೆಗೂ 500ಕ್ಕೂ ಹೆಚ್ಚು ಹೋಂಸ್ಟೇ ಮಾಲೀಕರು ನೋಂದಣಿಗಾಗಿ ಅರ್ಜಿಸಲ್ಲಿಸಿದ್ದು, ನೋಂದಣಿ ಮಾಡಿಸದಿರುವ ಎಲ್ಲಾ ಅರ್ಹ ಹೋಂಸ್ಟೇ ಮಾಲೀಕರು ವಿಳಂಬ ಮಾಡದೆ ಶೀಘ್ರವೇ ಪ್ರವಾಸೋದ್ಯಮ ಇಲಾಖೆಯ ಮೂಲಕ ಅಧಿಕೃತವಾಗಿ ನೋಂದಾಯಿಸಿಕೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಯ ಆಯುಕ್ತರಾದ ಡಾ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆಯುಕ್ತರು, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು “ಕರ್ನಾಟಕ ಹೋಂಸ್ಟೇ ನೋಂದಣಿ ಮಾರ್ಗಸೂಚಿ–2025” ಗೆ ಜಾರಿಗೆ ತಂದಿದ್ದು, ಇದಕ್ಕೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈವರೆಗೂ 500ಕ್ಕೂ ಹೆಚ್ಚು ಹೋಂಸ್ಟೇ ಮಾಲೀಕರು ಅಧಿಕೃತ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಯೊಂದು ಹೋಂಸ್ಟೇಗೂ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಇದುವರೆಗೂ ನೋಂದಣಿ ಮಾಡಿಸದಿರುವ ಎಲ್ಲಾ ಅರ್ಹ ಹೋಂಸ್ಟೇ ಮಾಲೀಕರು ವಿಳಂಬ ಮಾಡದೆ ಶೀಘ್ರವೇ ಪ್ರವಾಸೋದ್ಯಮ ಇಲಾಖೆಯ ಮೂಲಕ ಅಧಿಕೃತವಾಗಿ ನೋಂದಾಯಿಸಿಕೊಳ್ಳುವಂತೆ ಆಯುಕ್ತರು ಕರೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಟ್ಟುನಿಟ್ಟಿನ ಪರಿಶೀಲನಾ ಪ್ರಕ್ರಿಯೆ:
ಸ್ವೀಕೃತವಾಗಿರುವ ಅರ್ಜಿಗಳ ಪೈಕಿ ಈಗಾಗಲೇ ಸುಮಾರು 400 ಅರ್ಜಿಗಳ ದಾಖಲಾತಿ ಪರಿಶೀಲನೆ ಪೂರ್ಣಗೊಂಡಿದ್ದು, ಪ್ರಸ್ತುತ ಸ್ಥಳ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ. ಸಲ್ಲಿಕೆಯಾಗುವ ಪ್ರತಿ ಅರ್ಜಿಯನ್ನೂ ಪ್ರವಾಸೋದ್ಯಮ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ / ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳನ್ನೊಳಗೊಂಡ ತಂಡವು ಕೂಲಂಕಷವಾಗಿ ಪರಿಶೀಲಿಸಿದ ಬಳಿಕವೇ ನೋಂದಣಿ ಪ್ರಮಾಣಪತ್ರವನ್ನು ವಿತರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಮೂಲಸೌಕರ್ಯ, ಭದ್ರತೆ, ಸ್ವಚ್ಛತೆ ಹಾಗೂ ಕಾರ್ಯಾಚರಣೆಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ.

ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ಕನಿಷ್ಠ ಮಾನದಂಡಗಳನ್ನು ಪೂರೈಸದ ಹೋಂಸ್ಟೇಗಳಿಗೆ ನೋಂದಣಿ ಮಾನ್ಯತೆ ನೀಡಲಾಗುವುದಿಲ್ಲ. ಅಂತಹವರು ಅಗತ್ಯ ಲೋಪಗಳನ್ನು ಸರಿಪಡಿಸಿಕೊಂಡು ಮರು-ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲಾ ಹಂತದ ಪರಿಶೀಲನೆಗಳು ಮುಕ್ತಾಯಗೊಂಡು, ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮೋದನೆ ದೊರೆತ 45 ದಿನಗಳ ಒಳಗಾಗಿ ನೋಂದಣಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣಪತ್ರವು ಐದು ವರ್ಷಗಳ ಕಾಲ ಮಾನ್ಯತೆ ಹೊಂದಲಿದ್ದು, ತದನಂತರ ನವೀಕರಿಸಿಕೊಳ್ಳುವುದು ಕಡ್ಡಾಯ.

ನೈಜ ಹೋಂಸ್ಟೇಗಳಿಗೆ ಸರ್ಕಾರದಿಂದ ಅಧಿಕೃತ ಮಾನ್ಯತೆ:
ಈ ಕಡ್ಡಾಯ ನೋಂದಣಿ ವ್ಯವಸ್ಥೆಯಿಂದಾಗಿ ರಾಜ್ಯದಲ್ಲಿನ ನೈಜ ಹೋಂಸ್ಟೇಗಳಿಗೆ ಸರ್ಕಾರದ ಅಧಿಕೃತ ಮಾನ್ಯತೆ ದೊರೆಯಲಿದೆ. ಇದು ಪ್ರವಾಸಿಗರಿಗೆ ವಿಶ್ವಾಸಾರ್ಹ ಹಾಗೂ ಸುರಕ್ಷಿತ ವಸತಿ ವ್ಯವಸ್ಥೆಯನ್ನು ಒದಗಿಸುವುದರ ಜೊತೆಗೆ, ಇಲಾಖೆಯ ಮಟ್ಟದಲ್ಲಿ ಅಧಿಕೃತ ಡೇಟಾಬೇಸ್ ನಿರ್ವಹಿಸಲು ಸಹಕಾರಿಯಾಗಲಿದೆ. ನೋಂದಾಯಿತ ಹೋಂಸ್ಟೇಗಳು ಸರ್ಕಾರದ ಸುರಕ್ಷತಾ ಮತ್ತು ಕಾರ್ಯಾಚರಣಾ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಪಾಲಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಗುಣಮಟ್ಟದ ಹಾಗೂ ಅತ್ಯಂತ ಸುರಕ್ಷಿತವಾದ ಹೋಂಸ್ಟೇಗಳ ಜಾಲವನ್ನು ನಿರ್ಮಿಸುವುದು ನಮ್ಮ ಇಲಾಖೆಯ ಪ್ರಧಾನ ಉದ್ದೇಶ. ನಿಗದಿತ ಮಾನದಂಡಗಳನ್ನು ಪೂರೈಸುವ ಹೋಂಸ್ಟೇಗಳಿಗೆ ಮಾತ್ರ ಮಾನ್ಯತೆ ನೀಡಲಾಗುತ್ತಿದೆ. ಇದರಿಂದ ಪ್ರವಾಸಿಗರಿಗೆ ವಿಶ್ವಾಸಾರ್ಹ ವಸತಿ ವ್ಯವಸ್ಥೆ ದೊರೆಯುವುದರ ಜೊತೆಗೆ, ರಾಜ್ಯದಲ್ಲಿ ಜವಾಬ್ದಾರಿಯುತ ಹಾಗೂ ಸುಸ್ಥಿರ ಪ್ರವಾಸೋದ್ಯಮಕ್ಕೆ ಇಂಬು ಸಿಗಲಿದೆ ಎಂದು ಡಾ. ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಹೊಸ ಮಾರ್ಗ ಸೂಚಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್, ನೂತನ ಮಾರ್ಗಸೂಚಿಗೆ ರಾಜ್ಯದ ಹೋಂಸ್ಟೇ ಮಾಲೀಕರಿಂದ ಅತ್ಯುತ್ತಮ ಸ್ಪಂದನೆ ದೊರೆಯುತ್ತಿದ್ದು, ಈಗಾಗಲೇ 500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ನೋಂದಣಿಯನ್ನು ಕಡ್ಡಾಯಗೊಳಿಸಿರುವುದರಿಂದ, ಎಲ್ಲಾ ನಿರ್ವಾಹಕರು ಶೀಘ್ರವೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇದರಿಂದ ಪ್ರವಾಸಿಗರಲ್ಲಿ ವಿಶ್ವಾಸ ವೃದ್ಧಿಯಾಗುವುದಲ್ಲದೆ, ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮತ್ತಷ್ಟು ಬಲ ಬರಲಿದೆ ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular