ಶಿಮ್ಲಾ: ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಬಸ್ ವೊಂದು ಕಂದಕಕ್ಕೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ 7 ಜನರು ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ನಡೆದಿದೆ.
ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿಬಿದ್ದಿದೆ. ಪರಿಣಾಮ ಏಳು ಪ್ರಯಾಣಿಕರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈರಾಗಢ-ಚಂಬಾ ಮಾರ್ಗದ ದೇವಿಕೋಠಿ ಬಳಿ ಈ ದುರಂತ ಸಂಭವಿಸಿದೆ.
ಬೈರಾಗಢದಿಂದ ಚಂಬಾಗೆ ತೆರಳುತ್ತಿದ್ದ ಖಾಸಗಿ ಬಸ್, ದೇವಿಕೋಠಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದೆ. ಅಪಘಾತ ಸಂಭವಿಸಿದ ವೇಳೆ ಬಸ್ನಲ್ಲಿ ಒಟ್ಟು 22 ಪ್ರಯಾಣಿಕರಿದ್ದರು. ಈ ಪೈಕಿ 7 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಕಂದಕದಿಂದ ಮೇಲೆತ್ತಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

