ಬೆಂಗಳೂರು: ಆರ್ಟ್ ಆಫ್ ಲೀವಿಂಗ್ ನ ರವಿಶಂಕರ್ ಗುರೂಜಿ ವಿರುದ್ಧದ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠ, ರವಿಶಂಕರ್ ಗುರೂಜಿ ವಿರುದ್ಧ ಯಾವುದೇ ಸ್ಪಷ್ಟ ಆರೋಪಗಳಿಲ್ಲದೆ ಪ್ರಕರಣ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ತಿಳಿಸಿದ್ದು, ಬೆಂಗಳೂರು ಮಹಾನಗರ ಟಾಸ್ಕ್ ಫೋರ್ಸ್ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿದೆ. ಈ ಮೂಲಕ ರವಿಶಂಕರ್ ಗುರೂಜಿ ವಿರುದ್ಧದ ಭೂಕಬಳಿಕೆ ಪ್ರಕರಣವನ್ನು ರದ್ದುಗೊಳಿಸಿದೆ.
ಬೆಂಗಳೂರು ಮಹಾನಗರ ಟಾಸ್ಕ್ ಫೋರ್ಸ್ 19 ಸೆಪ್ಟೆಂಬರ್ 2025ರಂದು ಕರ್ನಾಟಕ ಭೂ ಆದಾಯ ಕಾಯ್ದೆ 1964 ಅಡಿಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿತ್ತು. ಕಾಗ್ಗಲಿಪುರ ಗ್ರಾಮದ ವಿವಿಧ ಸರ್ವೇ ಸಂಖ್ಯೆಗಳಲ್ಲಿನ ಸರ್ಕಾರಿ ಭೂಮಿ, ಕೆರೆ ಮತ್ತು ರಾಜಕಾಲುವೆ ಅಕ್ರಮವಾಗಿ ಕಬಳಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಪಿಐಎಲ್, ಲ್ಯಾಂಡ್ ಗ್ರಾಬಿಂಗ್ ವಿಶೇಷ ನ್ಯಾಯಾಲಯದ ವಿಚಾರಣೆ ಮತ್ತು ತಹಶೀಲ್ದಾರ್ ವರದಿ ಆಧರಿಸಿ ದೂರು ದಾಖಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ರವಿಶಂಕರ್ ಗುರೂಜಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಪರಿಶೀಲಿಸಿದ ಹೈಕೋರ್ಟ್ ದೂರಿನಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಸ್ಪಷ್ಟ ಆರೋಪಗಳಿಲ್ಲವೆಂದು ತಿಳಿಸಿದೆ. ಹೀಗಾಗಿ ಕೇವಲ ಪ್ರತಿವಾದಿಯಾಗಿ ಹೆಸರು ಸೇರಿಸಿರುವುದನ್ನು ಆಧಾರವನ್ನಾಗಿಟ್ಟುಕೊಂಡು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಾಥಮಿಕ ಸಾಕ್ಷ್ಯಗಳಿಲ್ಲದೆ ಪ್ರಕರಣ ಮುಂದುವರಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್ ಪೀಠ, ರವಿಶಂಕರ್ ಗುರೂಜಿ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದೆ.

