HomeKarnatakaಗಡಿಪಾರು ಆದೇಶಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಅಧಿಕಾರವಿಲ್ಲ ಎಂದ ಹೈಕೋರ್ಟ್

ಗಡಿಪಾರು ಆದೇಶಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಅಧಿಕಾರವಿಲ್ಲ ಎಂದ ಹೈಕೋರ್ಟ್

ಬೆಂಗಳೂರು: ಆರೋಪಿಗಳನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (SP)ಗೆ ಗಡಿಪಾರು ಆದೇಶ ಮಾಡುವುದಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಅಲ್ಲದೇ ಜಿಲ್ಲಾ ಪೊಲೀಸ್ ವರಿಷ್ಠಿಕಾರಿಗಳಿಗೆ ಈ ಅಧಿಕಾರ ನೀಡಿ ರಾಜ್ಯ ಸರ್ಕಾರ 2025ರ ನವೆಂಬರ್ 18ರಂದು ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಿ ಆದೇಶಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಡಿಪಾರು ಮಾಡಿದ್ದ ಆದೇಶವನ್ನು ಪ್ರಶ್ನಿಸಿ ಚಂದ್ರಕಾಂತ್‌ ಶಂಕರ್‌ ವಡ್ಡರ್‌ ಎಂಬವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅಪರಾಧ ಎಸಗುವ ಸಾಧ್ಯತೆಯಿರುವ ಹಾಗೂ ಈಗಾಗಲೇ ಕೆಲ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗಳನ್ನು ಗಡಿಪಾರು ಮಾಡುವುದಕ್ಕೆ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 55 ಮತ್ತು 56ರ ಅಡಿ ಅಧಿಕಾರ ನೀಡಲಿದೆ. ಆದರೆ, ಕಾಯ್ದೆಯಂತೆ ಬೆಂಗಳೂರು ಮತ್ತು ಇತರ ಕಮಿಷನರೇಟ್​ಗಳಲ್ಲಿ ಪೊಲೀಸ್ ಕಮಿಷನರ್​ಗಳು ಮಾತ್ರ ಸಮರ್ಥ ಪ್ರಾಧಿಕಾರವಾಗಿದ್ದಾರೆ. ಇತರ ಪ್ರದೇಶಗಳಲ್ಲಿ ಸರ್ಕಾರವು ಅಧಿಸೂಚನೆ ಮೂಲಕ ಜಿಲ್ಲಾಧಿಕಾರಿ (ಡಿಎಂ) ಅಥವಾ ಉಪ ವಿಭಾಗಾಧಿಕಾರಿಗಳಿಗೆ (ಎಸಿ) ಮಾತ್ರ ಈ ಅಧಿಕಾರವಿರಲಿದೆ.

ಶಾಸನಸಭೆ ರೂಪಿಸಿದ ಶಾಸನಬದ್ಧ ಅವಕಾಶವನ್ನು ಕಾರ್ಯಾಂಗದ ಒಂದು ಅಧಿಸೂಚನೆಯ ಮೂಲಕ ವಿಸ್ತರಿಸಿ, ಕಾಯ್ದೆಯಲ್ಲಿ ಉಲ್ಲೇಖವಿಲ್ಲದ ಅಧಿಕಾರಿಗೆ ಈ ಅಧಿಕಾರವನ್ನು ನೀಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಪೀಠ ಹೇಳಿದೆ.

ಅಲ್ಲದೆ, ಸಂಗೀತಾ ಸೂರ್ಯವಂಶಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲೇಖಿಸಿರುವ ನ್ಯಾಯಪೀಠ, ಸರ್ಕಾರದ ಸುತ್ತೋಲೆ ಅಥವಾ ಅಧಿಸೂಚನೆಗಳು ಮೂಲ ಕಾಯ್ದೆಯಯಲ್ಲಿನ ನಿಯಮಗಳ ವಿರುದ್ಧದ ಕ್ರಮಕ್ಕೆ ಮುಂದಾಗಲು ಅವಕಾಶವಿಲ್ಲ. ಆದ್ದರಿಂದ ಕಮಿಷನರ್, ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿಯಲ್ಲದ ಎಸ್​​ಪಿಗೆ ಗಡಿಪಾರು ಆದೇಶ ಹೊರಡಿಸುವ ಅಧಿಕಾರವಿಲ್ಲ. ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಹೊರಡಿಸುವ ಇಂತಹ ಆದೇಶಗಳು ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾಗಿರಲಿದೆ ಎಂದು ತಿಳಿಸಿದೆ.

ಆದರೆ, ಕರ್ನಾಟಕ ಪೊಲೀಸ್ ಕಾಯ್ದೆ 1963ರ ಪ್ರಕಾರ ಕಾನೂನುಬದ್ಧವಾಗಿ ಅಧಿಕಾರ ಹೊಂದಿರುವ ಸೂಕ್ತ ಪ್ರಾಧಿಕಾರದಿಂದ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶವಿರಲಿದೆ ಎಂದು ನ್ಯಾಯ ಪೀಠ ಹೇಳಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ನಿವಾಸಿ ಚಂದ್ರಕಾಂತ್ ಶಂಕರ್ ವಡ್ಡರ್ ಎಂಬವರನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು 2026ರ ಏಪ್ರಿಲ್ 28ರಂದು ಸೆಕ್ಷನ್ 55ರ ಅಡಿ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಚಂದ್ರಕಾಂತ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, 2025ರ ನವೆಂಬರ್ 25ರ ಅಧಿಸೂಚನೆಯ ಮೂಲಕ ರಾಜ್ಯ ಸರ್ಕಾರವು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಈ ಅಧಿಕಾರ ನೀಡಿ ಆದೇಶಿಸಿದೆ ಎಂದು ವಾದ ಮಂಡಿಸಿದ್ದರು. ಆದರೆ ಜಿಲ್ಲಾ ಪೊಲೀಸ್ ವರಿಷ್ಠಿಕಾರಿಗೆ ಗಡಿಪಾರು ಆದೇಶಕ್ಕೆ ಅಧಿಕಾರವಿಲ್ಲ ಎಂದು ಹೇಳಿರುವ ಹೈಕೋರ್ಟ್, ಕೆಲ ಸ್ಪಷ್ಟನೆಯನ್ನು ನೀಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular