ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಎಷ್ಟು ಸಿಲಿಂಡರ್ ಗಳು ದಾಸ್ತಾನು ಇವೆ ಎಂಬ ಬಗ್ಗೆ ವಿವರವಾಗಿ ಮಾಹಿತಿ ನೀಡುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ವಾಣಿಜ್ಯ ಬಳಕೆ ಸಿಲಿಂಡರ್ ಸರಬರಾಜು ನಿಲ್ಲಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ರಾಜ್ಯವಾರು ಎಲ್.ಪಿ.ಜಿ. ಸಿಲಿಂಡರ್ ಗಳ ಹಂಚಿಕೆ ಪ್ರಕ್ರಿಯೆ, ಮಾರ್ಚ್ ತಿಂಗಳಲ್ಲಿ ಹಂಚಿಕೆಯಲ್ಲಿ ರಾಜ್ಯದ ಪಾಲು ಎಷ್ಟು ಮತ್ತು ರಾಜ್ಯದಲ್ಲಿ ಪ್ರಸ್ತುತ ಸಿಲಿಂಡರ್ ದಾಸ್ತಾನು ಎಷ್ಟಿದೆ ಎನ್ನುವ ಕುರಿತಾಗಿ ವಿವರವಾಗಿ ಮಾಹಿತಿ ನೀಡುವಂತೆ ನಿರ್ದೇಶಿಸಿದೆ.
ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಮತ್ತು ಪದಾಧಿಕಾರಿಗಳು ಸಲ್ಲಿಸಿದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠ ಈ ಕುರಿತಾಗಿ ನಿರ್ದೇಶಿಸಿದ್ದು, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

