ಬೆಂಗಳೂರು: ಪ್ರಯಾಣಿಕರ ಸಂಖ್ಯೆ ಪರಿಗಣಿಸಿ ಮಾರ್ಗ ನಿರ್ಧರಿಸುವಂತೆ ಸರ್ಕಾರ ಮತ್ತು ಮೆಟ್ರೋ ನಿಗಮಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ನಾಗರಬಾವಿ ಹೊರ ವರ್ತುಲ ರಸ್ತೆಯಲ್ಲಿ ಬರುವ ನಮ್ಮ ಮೆಟ್ರೋ ಆರೆಂಜ್ ಮಾರ್ಗದ ಅಲೈನ್ ಮೆಂಟ್ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ. ನಾಗರಬಾವಿ ಆಸ್ತಿ ಮಾಲೀಕರು ಮತ್ತು ವಾಣಿಜ್ಯ ಸಂಸ್ಥೆಗಳ ಕಲ್ಯಾಣ ಸಂಘ ಸಲ್ಲಿಸಿದ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯಪೀಠ ಉದ್ದೇಶಿತ ಮೆಟ್ರೋ ಮಾರ್ಗದ ಅಲೈನ್ಮೆಂಟ್ ಪರಿಶೀಲಿಸಿ ನಿರ್ಧರಿಸುವುದು ಸಂಬಂಧಿಸಿದ ಅಧಿಕಾರಿಗಳ ಜವಾಬ್ದಾರಿಯಾಗಿದೆ.
ಮೆಟ್ರೋ ಮಾರ್ಗದ ಅಲೈನ್ಮೆಂಟ್ ನಿರ್ಧರಿಸಲು ಪ್ರಯಾಣಿಕರ ಸಂಖ್ಯೆ ಸೇರಿದಂತೆ ವಿವಿಧ ಅಂಶ ಪರಿಗಣಿಸಬೇಕಾಗುತ್ತದೆ. ಆದರೂ ಅರ್ಜಿದಾರರು ಪರಿಸರದ ಮೇಲಿನ ಪರಿಣಾಮ ಕುರಿತು ವರದಿ ಲಗತ್ತಿಸಿ ಮನವಿ ಪತ್ರ ನೀಡಿದ್ದಾರೆ. ಅವರನ್ನು ರಾಜ್ಯ ಸರ್ಕಾರ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ ಪರಿಗಣಿಸಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.
ನಾಗರಬಾವಿ ವೃತದಿಂದ ವಿನಾಯಕ ಲೇಔಟ್ ಪಾಪರೆಡ್ಡಿಪಾಳ್ಯ ಮತ್ತು ಬಿಡಿಎ ಕಾಂಪ್ಲೆಕ್ಸ್ ಮೂಲಕ ನಾಗರಬಾವಿಗೆ ಹೋಗುವ ರೀತಿ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರಿಂದ ನಾಗರಬಾವಿಯಲ್ಲಿ ಹಸಿರು ಹೊದಿಕೆಯ ಮೇಲೆ ಪರಿಣಾಮ ಗಂಭೀರ ಪರಿಣಾಮ ಉಂಟಾಗುತ್ತದೆ. 600 ಕ್ಕೂ ಅಧಿಕ ಮರ ಕತ್ತರಿಸಬೇಕಾಗುತ್ತದೆ. 600ಕ್ಕೂ ಅಧಿಕ ಮನೆ ತೆರವುಗೊಳಿಸಬೇಕಾಗುತ್ತದೆ. ಅದರ ಬದಲು ಮೂಲ ಯೋಜನೆಯಂತೆ ದ್ವಾರಕಾ ನಗರ ನಿಲ್ದಾಣದಿಂದ ಚೌಡೇಶ್ವರಿ ನಗರ ನಿಲ್ದಾಣದವರೆಗೆ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ಮಾರ್ಗ ನಿರ್ಮಿಸಲು ರಾಜ್ಯ ಸರ್ಕಾರ ಮತ್ತು ಬಿಎಂಆರ್ಸಿಎಲ್ ಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

