ಬೆಂಗಳೂರು: ಪಿಂಚಣಿ ಹಣವನ್ನು ಸಾಲದ ಮರುಪಾವತಿಗೆ ಸಂದಾಯ ಮಾಡಿಕೊಂಡರೆ ಅದು ಸಂವಿಧಾನದ 21ನೇ ವಿಧಿಯ ಬದುಕುವ ಹಕ್ಕು ಉಲ್ಲಂಘನೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಬ್ಯಾಂಕ್ ನೌಕರರ ಪಿಂಚಣಿಯ ಶೇಕಡ 50ಕ್ಕಿಂತ ಹೆಚ್ಚಿನ ಹಣವನ್ನು ಅವರ ಸಾಲದ ಮರುಪಾವತಿಗೆ ಕಡಿತಗೊಳಿಸುವುದು ಸರಿಯಲ್ಲ ಎಂದು ಆದೇಶಿಸಿದೆ.
ಕೆನರಾ ಬ್ಯಾಂಕ್ ನಿವೃತ್ತ ನೌಕರ ಕೇರಳದ ತ್ರಿಶೂರು ಜಿಲ್ಲೆಯ ಒ.ಕೆ. ಮುರುಗನ್(70) ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ಏಕಸದಸ್ಯ ಪೀಠ ಮುರುಗನ್ ಅವರ ಅರ್ಜಿಯನ್ನು ಭಾಗಶಃ ಪುರಸ್ಕರಿಸಿ ಆದೇಶ ನೀಡಿದೆ.
ಯಾವುದೇ ಸಿಬ್ಬಂದಿ ನಿವೃತ್ತಿಯಾದ ನಂತರ ಉತ್ತಮ ಜೀವನ ಸಾಗಿಸಲು ಪಿಂಚಣಿ ಪಡೆಯುತ್ತಾರೆ. ಈ ಪ್ರಕರಣದಲ್ಲಿ ಅರ್ಜಿದಾರರು ಪಡೆದುಕೊಂಡಿದ್ದ ಗೃಹ ಮತ್ತು ಶೈಕ್ಷಣಿಕ ಸಾಲದ ಕಂತನ್ನು ಭರ್ತಿ ಮಾಡಿಕೊಳ್ಳಲು ಅವರ ಪಿಂಚಣಿಯ ಸಂಪೂರ್ಣ ಮೊತ್ತವನ್ನು ಮರುಪಾವತಿಗೆ ಬಳಕೆ ಮಾಡಿಕೊಳ್ಳುತ್ತಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸಂಪೂರ್ಣ ಪಿಂಚಣಿ ಮೊತ್ತ ಸಾಲದ ಮರುಪಾವತಿಗೆ ಕಡಿತ ಮಾಡಿಕೊಂಡಲ್ಲಿ ಪಿಂಚಣಿಯ ಮೂಲ ಉದ್ದೇಶವೇ ಮರೆಯಾದಂತೆ. ಸಿಬ್ಬಂದಿ ಮತ್ತು ಆತನ ಕುಟುಂಬ ಪಿಂಚಣಿಯನ್ನೇ ನಂಬಿಕೊಂಡಿದ್ದಲ್ಲಿ ಆರ್ಥಿಕ ಸ್ಥಿತಿ ಶೋಚನೀಯವಾಗುತ್ತದೆ ಎಂದು ಹೇಳಿದ ನ್ಯಾಯ ಪೀಠ, ಶೇಕಡ 50ಕ್ಕಿಂತ ಹೆಚ್ಚಿನ ಪಿಂಚಣಿಯ ಮೊತ್ತವನ್ನು ಅವರ ಸಾಲದ ಮರುಪಾವತಿಗೆ ಕಡಿತಗೊಳಿಸುವುದು ಸರಿಯಲ್ಲ ಎಂದು ಹೇಳಿದೆ.