ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾಗಿರುವ 74 ಅಸಹಜ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲೆಗಳ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಕಾಲಾವಕಾಶ ನೀಡಿದ್ದು, ಆ. 24ಕ್ಕೆ ಮುಂದಿನ ವಿಚಾರಣೆ ಮುಂದೂಡಲಾಗಿದೆ.
ಎಲ್ಲ 74 ಪ್ರಕರಣಗಳಿಗೆ ತನಿಖೆಗೆ ಪ್ರತ್ಯೇಕ ಎಫ್ಐಆರ್ ದಾಖಲಿಸುವಂತೆ ಎಸ್ಐಟಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸೌಜನ್ಯಾ ಅವರ ತಾಯಿ ಕುಸುಮಾವತಿ ಸಲ್ಲಿಸಿದ ಪಿಐಎಲ್ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿಂದ ವಿಭಾಗೀಯ ನ್ಯಾಯಪೀಠದಲ್ಲಿ ಮಂಗಳವಾರ ನಡೆದಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ವಿಭಾಗೀಯ ಪೀಠ, ಪ್ರಕರಣಗಳ ಬಗ್ಗೆ ವರದಿ ನೀಡುವುದಾಗಿ ಮಾರ್ಚ್ ನಲ್ಲಿ ಸರ್ಕಾರ ತಿಳಿಸಿದ್ದು, ಆ ವಿಚಾರ ಏನಾಗಿದೆ ಎಂದು ಪ್ರಶ್ನಿಸಿದೆ. ಸರ್ಕಾರದ ಪರ ವಕೀಲರು ಬೇರೆ ಪೀಠದ ಎದುರು ಅಡ್ವೊಕೇಟ್ ಜನರಲ್ ಹಾಜರಿದ್ದ ಕಾರಣ ಎರಡು ವಾರಗಳ ಕಾಲಾವಕಾಶ ಕೋರಿದ್ದಾರೆ. ಇದನ್ನು ನ್ಯಾಯಪೀಠ ಪರಿಗಣಿಸಿ ಮುಂದಿನ ವಿಚಾರಣೆಯನ್ನು ಆ. 24ಕ್ಕೆ ಮುಂದೂಡಲಾಗಿದೆ.

