ಅಸ್ಸಾಂನ ಚರೈಡಿಯೋ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ ಪುಟಾಣಿ ಮಕ್ಕಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ತರಗತಿ ಕೋಣೆಯಲ್ಲೇ ಮಕ್ಕಳನ್ನು ಕ್ರೂರವಾಗಿ ಹೊಡೆಯುತ್ತಿರುವ ದೃಶ್ಯಗಳು ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಮಥುರಾಪುರ ಬಗಿಚಾ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, 51 ವರ್ಷದ ಮೊಹಮ್ಮದ್ ಆರಿಫುಲ್ ಇಸ್ಲಾಂ ಎಂಬ ಶಿಕ್ಷಕನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಶಾಲೆಯ ಮುಖ್ಯೋಪಾಧ್ಯಾಯರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಶಿಕ್ಷಕನ ಅಸಲಿ ಮುಖವಾಡ ಬಯಲಾಗಿದೆ. ವಿಡಿಯೋದಲ್ಲಿ ಶಿಕ್ಷಕನು ಹಲವಾರು ವಿದ್ಯಾರ್ಥಿಗಳಿಗೆ ದೈಹಿಕವಾಗಿ ಹಿಂಸೆ ನೀಡುವುದು ಮಾತ್ರವಲ್ಲದೆ, ಒಂದು ಹಂತದಲ್ಲಿ ಮಗುವನ್ನು ಕಿಟಕಿಯ ಕಡೆಗೆ ತಳ್ಳಲು ಪ್ರಯತ್ನಿಸಿರುವುದು ಕಂಡುಬಂದಿದೆ.
ಕೇವಲ ಹಲ್ಲೆ ಮಾತ್ರವಲ್ಲದೆ, ಈ ಶಿಕ್ಷಕ ತರಗತಿಯ ಸಮಯದಲ್ಲಿ ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪೋಷಕರು ಮತ್ತು ಸ್ಥಳೀಯ ಸಂಘಟನೆಗಳು ಶಾಲೆಯ ಮುಂದೆ ಪ್ರತಿಭಟನೆ ನಡೆಸಿ, ಶಿಕ್ಷಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಸ್ಸಾಂ ಟೀ ಟ್ರೈಬ್ಸ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ತಕ್ಷಣದ ಕ್ರಮಕ್ಕೆ ಆಗ್ರಹಿಸಿದೆ.
ಘಟನೆಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿಯು ಮೇ 5 ರಂದು ಶಿಕ್ಷಣ ಇಲಾಖೆಗೆ ಲಿಖಿತ ದೂರು ನೀಡಿದ್ದು, ಇಲಾಖೆಯು ತನಿಖೆಗೆ ಆದೇಶಿಸಿದೆ. ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಕ್ಕಳ ರಕ್ಷಣೆ ಮತ್ತು ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

