ಇಲ್ಲಿದೆ ಜೀರ್ಣಕ್ರಿಯೆಗೆ ಉಪಕಾರಿ ಬೆಂಡೆಕಾಯಿ ಚಟ್ನಿ ಮಾಡುವ ವಿಧಾನ

ಬೆಂಡೆಕಾಯಿಯಲ್ಲಿ ಅಧಿಕ ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆಗೆ ಉಪಕಾರಿ. ಅಲ್ಲದೆ ಮಧುಮೇಹಕ್ಕೆ ರಾಮಬಾಣ ಈ ಬೆಂಡೆಕಾಯಿ.

ಇನ್ನೂ ಅನೇಕ ರೀತಿಯಲ್ಲಿ ಉಪಕಾರಿಯಾಗಿರುವ ಬೆಂಡೆಕಾಯಿಯಿಂದ ಸಾಮಾನ್ಯವಾಗಿ ಪಲ್ಯ, ಗೊಜ್ಜು ಮತ್ತು ಹುಳಿಯನ್ನು ಮಾಡುತ್ತೇವೆ. ಆದರೆ ಇದೀಗ ಅತಿ ಸುಲಭವಾಗಿ ತಯಾರಿಸಬಹುದಾದ ಚಟ್ನಿಯ ಬಗ್ಗೆ ತಿಳಿದುಕೊಳ್ಳೋಣ.

ಬೇಕಾಗುವ ಸಾಮಗ್ರಿಗಳು

ಬೆಂಡೆಕಾಯಿ – ಅರ್ಧ ಕೆಜಿ
ಹಸಿ ಮೆಣಸಿನಕಾಯಿ 7-8
ಕೊತ್ತಂಬರಿ ಸೊಪ್ಪು ಸ್ವಲ್ಪ
ಬೆಲ್ಲ ಗಾತ್ರದ ಹುಣಸೆಹಣ್ಣು
ಜೀರಿಗೆ 1 ಟೀ ಸ್ಪೂನ್
ಸಾಸಿವೆ ಅರ್ಧ ಟೀ ಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಸ್ವಲ್ಪ ಹೊತ್ತು ಆರಲು ಬಿಡಬೇಕು. ನಂತರ ಬೆಂಡೆಕಾಯಿಯನ್ನು ಪಲ್ಯಕ್ಕೆ ಹೆಚ್ಚಿಕೊಳ್ಳುವಂತೆ ಹೆಚ್ಚಿಕೊಳ್ಳಬೇಕು. ಬಾಣಲಿಯಲ್ಲಿ 1 ಸ್ಪೂನ್ ಎಣ್ಣೆ ಹಾಕಿಕೊಂಡು ಹುಣಸೆ ಹಣ್ಣಿನ ಹುಳಿಯೊಂದಿಗೆ ಅದರ ಲೋಳೆ ಹೋಗುವ ತನಕ ಚೆನ್ನಾಗಿ ಹುರಿಯಬೇಕು.

ಅದೇ ಬಾಣಲಿಗೆ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಹಾಕಿ ಸ್ವಲ್ಪ ಹೊತ್ತು ಬಾಡಿಸಿಕೊಳ್ಳಬೇಕು. ಹುರಿದುಕೊಂಡ ಪದಾರ್ಥಗಳು ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಬೇಕು.

ರುಬ್ಬಿಕೊಂಡ ಮಿಶ್ರಣವನ್ನು ಮತ್ತೊಮ್ಮೆ ಬಾಣಲಿಯಲ್ಲಿ 7-8 ಚಮಚ ಎಣ್ಣೆ ಹಾಕಿ ಸಾಸಿವೆ ಹಾಗೂ ಸ್ವಲ್ಪ ಜೀರಿಗೆ ಒಗ್ಗರಣೆ ಮಾಡಿಕೊಂಡು ಅದಕ್ಕೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 5 ನಿಮಿಷ ಚೆನ್ನಾಗಿ ಬಾಡಿಸಿದರೆ ಬೆಂಡೆಕಾಯಿ ಚಟ್ನಿ ಸಿದ್ಧವಾಗುತ್ತದೆ. ಈ ಬೆಂಡೆಕಾಯಿ ಚಟ್ನಿ ಚಪಾತಿ, ಬಿಸಿ ಬಿಸಿ ಅನ್ನ, ರೊಟ್ಟಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read