ದುನಿಯಾ ಡಿಜಿಟಲ್ ಡೆಸ್ಕ್ : ಕರ್ನಾಟಕದಲ್ಲಿ ಪೋಕ್ಸೋ ಕಾಯಿದೆಯಡಿ ವಿಧಿಸಲಾಗುವ ದಂಡ, ಶಿಕ್ಷೆಯ ಕುರಿತು ನಿಮಗೆಷ್ಟು ಗೊತ್ತು..! ಪೋಕ್ಸೋ ಕಾಯಿದೆ (POCSO Act) ಎಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012, ಇದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಲೈಂಗಿಕ ದೌರ್ಜನ್ಯ, ಕಿರುಕುಳ, ಶೋಷಣೆ ಮತ್ತು ದುರುಪಯೋಗದಿಂದ ರಕ್ಷಿಸುವ ಭಾರತದ ಸಮಗ್ರ ಕಾನೂನಾಗಿದೆ; ಈ ಕಾಯ್ದೆಯು ಲೈಂಗಿಕ ದೌರ್ಜನ್ಯದ ಅಪರಾಧಗಳಿಗೆ ಕಠಿಣ ಶಿಕ್ಷೆಗಳನ್ನು ವಿಧಿಸುತ್ತದೆ, ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಮನೆಯಿಂದ ಶಾಲಾ ಕಾಲೇಜುಗಳಿಗೆ ಹೋಗಿ ಬರುವಾಗ ಅಥವಾ ಪತ್ಯೇತರ ಚಟುವಟಿಕೆಗಳಿಗೆ ಹೋಗಿ ಬರುವಾಗ, ಹೆಚ್ಚಿನ ಶೈಕ್ಷಣಿಕ ನೆರವಿಗಾಗಿ ಟ್ಯೂಷನ್ಗೆ ಹೋದಾಗಲೂ ವಿದ್ಯಾರ್ಥಿಗಳು ಹಿಂಸೆ, ತೊಂದರೆಗೀಡಾಗುವ ಸಾಧ್ಯತೆಗಳು ಇರುತ್ತವೆ.
ಇಂತಹ ತೊಂದರೆಗೆ ಒಳಗಾದ ಎಲ್ಲ ಮಕ್ಕಳು ಅವುಗಳೆಲ್ಲವನ್ನೂ ಎದುರಿಸಿ, ಜೀರ್ಣಿಸಿಕೊಂಡು ಸಾಮಾನ್ಯ ಜೀವನವನ್ನು ನಡೆಸಿಕೊಂಡು ಸಾಗುತ್ತಾರೆ ಎಂದು ಹೇಳಲು ಆಗುವುದಿಲ್ಲ. ಕೆಲವು ಮಕ್ಕಳು ಯಾರೊಡನೆಯೂ ಬೆರೆಯದೆ ಒಂಟಿಯಾಗಬಹುದು. ದೈಹಿಕನೋವು, ಮಾನಸಿಕ ನೋವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ಅವಮಾನದಿಂದ ಕುಗ್ಗಬಹುದು. ಸದಾಕಾಲಕ್ಕೂ ತಮ್ಮನ್ನು ತಾವೇ ಹಳಿದುಕೊಂಡು/ಬೈದುಕೊಂಡು ಸ್ವಯಂ ಹಾನಿ ಮಾಡಿಕೊಳ್ಳುವುದರತ್ತಲೂ ಮುಂದಾಗಬಹುದು.
ಇವೆಲ್ಲದರ ಒಟ್ಟು ಪರಿಣಾಮ ಮಕ್ಕಳು ಶಾಲಾ ಕಾಲೇಜುಗಳನ್ನು ತೊರೆಯಬಹುದು. ಶಿಕ್ಷಣದಿಂದ ವಿಮುಖರಾಗಬಹುದು. ಖಿನ್ನತೆಗೊಳಗಾಗಿ ಮಾನಸಿಕ ಅಸ್ವಸ್ಥರಾಗಬಹುದು. ದೈಹಿಕ ಹಿಂಸೆಯಿಂದಾಗಿ ಅಂಗವಿಕಲರಾಗಬಹುದು. ರೋಗಗ್ರಸ್ಥರಾಗಬಹುದು. ಚಿಕ್ಕವಯಸ್ಸಿನಲ್ಲೇ ಗರ್ಭಧರಿಸುವಂತಾಗಬಹುದು. ಇಲ್ಲವೇ ಬಾಲ್ಯವಿವಾಹಕ್ಕೆ ತುತ್ತಾಗಬಹುದು. ಕೆಲವೊಮ್ಮೆ ಮಾರಾಟ ಸಾಗಣೆಗೆ ಗುರಿಯಾಗಬಹುದು. ಈ ಎಲ್ಲವೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ಮಕ್ಕಳ ಮೇಲಾಗುವ ಅಪರಾಧಗಳು ಎನಿಸಿಕೊಳ್ಳುತ್ತವೆ.
ಯಾವುದೇ ಮಗು ಇಂತಹ ಅಪರಾಧಗಳಿಗೆ ಈಡಾಗಬಾರದು. ಎಲ್ಲಾ ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿ ಬೆಳೆಯಬೇಕು. ಉತ್ತಮ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ದೇಶದ ಸಂಪನ್ಮೂಲವಾಗಬೇಕು ಎಂಬುದು ಶಿಕ್ಷಣದ ಉದ್ದೇಶವಾಗಿದೆ. ಆದರೆ, ಇಂದಿನ ಕೆಲವು ಸಂದರ್ಭಗಳಲ್ಲಿ ಶಾಲಾಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ರೀತಿಯ ಹಿಂಸೆ, ಶೋಷಣೆಗಳು, ಅದರಲ್ಲೂ ಲೈಂಗಿಕ ಶೋಷಣೆಗೆ ಗುರಿಯಾಗುತ್ತಿರುವುದು ಕಂಡು ಬರುತ್ತಿದೆ. ವಿದ್ಯಾರ್ಥಿಗಳು ತಾವು ನಂಬಿದವರಿಂದಲೇ ಲೈಂಗಿಕ ಶೋಷಣೆಗೆ ಬಲಿಯಾದಾಗ ಗಲಿಬಿಲಿಗೊಳ್ಳುತ್ತಾರೆ. ತಮಗೇನು ಆಗುತ್ತಿದೆ ಎಂದು ಅರಿವಾಗದೆ ದಿಗ್ಧಾಂತರಾಗುತ್ತಾರೆ. ಅದರಲ್ಲೂ ಕಣ್ಣು ಕಾಣದ. ಮಾತುಬಾರದ, ಕಿವಿ ಕೇಳದ, ಮಾನಸಿಕ ಅಸ್ವಸ್ಥತೆಯಿರುವ ಅಥವಾ ಇನ್ಯಾವುದೇ ರೀತಿಯ ಅಂಗವಿಕಲತೆಯಿರುವ ಮಕ್ಕಳ ಮೇಲೆ ಈ ಶೋಷಣೆಗಳು, ಅದರಲ್ಲೂ ಲೈಂಗಿಕ ಶೋಷಣೆಯಾದರೆ ಪರಿಸ್ಥಿತಿ ಇನ್ನಷ್ಟು ಕ್ಲಿಷ್ಟವಾಗುತ್ತದೆ. ಯಾರಿಗೆ ಹೇಳಿಕೊಳ್ಳುವುದು, ಹೇಗೆ ಹೇಳುವುದು ಎಂದು ತಿಳಿಯದೆ ಚಡಪಡಿಸುತ್ತಾರೆ. ಅಪರಾಧಕ್ಕೆ ಈಡಾದ ಮೇಲೆ ತನಗೆ ಹೀಗಾಗಬಾರದಿತ್ತು ಎಂದು ಕೊರಗುತ್ತಾರೆ.
ಶಾಲೆ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳನ್ನು ರಕ್ಷಿಸಲು ವಿವಿಧ ನೀತಿ, ಕಾಯಿದೆಗಳು ಜಾರಿಯಲ್ಲಿವೆ. ಈ ಕೈಪಿಡಿಯು ಮಕ್ಕಳ ಮೇಲಿನ ವಿವಿಧ ರೀತಿಯ ಲೈಂಗಿಕ ಶೋಷಣೆ, ಹಿಂಸೆಗಳ ವಿರುದ್ಧ ರಕ್ಷಣೆ ಪಡೆಯುವ ವಿಧಾನಗಳ ಬಗ್ಗೆ ತಿಳಿಸುತ್ತದೆ. ಅಷ್ಟೇ ಅಲ್ಲದೇ ಬೇರೆ ವಿದ್ಯಾರ್ಥಿಗಳಿಗೆ, ವಯಸ್ಕರಿಗೆ ಮುಜುಗರವಾಗದಂತೆ, ತೊಂದರೆ ಕೊಡದಂತೆ ನಾವು ನಮ್ಮ ನಡವಳಿಕೆಗಳನ್ನು ಯಾವ ರೀತಿ ಸೂಕ್ತವಾಗಿರಿಸಿಕೊಳ್ಳಬೇಕೆಂಬ ಅಂಶಗಳನ್ನು ಮನದಟ್ಟು ಮಾಡುತ್ತದೆ.
ಮಕ್ಕಳ ಮೇಲೆ ಲೈಂಗಿಕ ಶೋಷಣೆ ಎಂದರೇನು?
18 ವರ್ಷದೊಳಗಿನ ಎಲ್ಲರೂ ಮಕ್ಕಳು. ಬಾಲ್ಯತನದಿಂದ ಹದಿವಯಸ್ಸನ್ನು ಪ್ರವೇಶಿಸಿ, ವಯಸ್ಕರಾಗುವ ಹಂತದಲ್ಲಿರುವವರು. ಈ ಹಂತದಲ್ಲಿ ಮಾನಸಿಕ, ದೈಹಿಕವಿಕಾಸ, ಸುತ್ತಮುತ್ತಲಿನ ಹಲವಾರು ಬೆಳವಣಿಗೆಗಳು, ಒತ್ತಡಗಳು. ಬೇಡಿಕೆಗಳು ಸಾಮಾನ್ಯವಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಹಲವು ರೀತಿಯ ಬೆಂಬಲ, ಒತ್ತಾಸೆಗಳನ್ನು ನೀಡಲು ಕುಟುಂಬ, ಶಾಲೆ, ಸಮಾಜ, ಸರ್ಕಾರ ಪ್ರಯತ್ನಿಸುತ್ತವೆ. ಮಕ್ಕಳೂ ಕೂಡಾ ತಮಗೆ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು, ಭವಿಷ್ಯದ ಶಿಕ್ಷಣ, ಕೌಶಲ್ಯ ಬೆಳವಣಿಗೆ, ಇತ್ಯಾದಿ ಯೋಜನೆಗಳನ್ನು ಮಾಡಿಕೊಳ್ಳುತ್ತಾರೆ.
ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ಕುರಿತಂತೆ ಇನ್ನಷ್ಟು ಅಂಶಗಳು
- ಮಕ್ಕಳ ಮೇಲೆ ದೈಹಿಕ ಬಲ ಬಳಸಿ ಹಿಂಸೆ/ದೌರ್ಜನ್ಯ ಎಸಗುವುದು.
- ಸಾಕಷ್ಟು ಸಂದರ್ಭಗಳಲ್ಲಿ, ಅಪರಾಧಿಯು ಮಕ್ಕಳಿಗೆ ಪರಿಚಯವಿರುವ ಮತ್ತು ವಿಶ್ವಾಸಾರ್ಹರೂ ಆದ ಪಾಲಕರು, ಪೋಷಕರು, ತರಬೇತುದಾರರು, ಶಿಕ್ಷಕರು ಆಗಿರುವ ಸಾಧ್ಯತೆಗಳಿವೆ.
- ಮಕ್ಕಳ ಲೈಂಗಿಕ ದುರುಪಯೋಗವು ಒಮ್ಮೆ ಮಾತ್ರ ಆಗುವ ಘಟನೆಯಿಂದ ಹಿಡಿದು ಅನೇಕ ದಿನಗಳು, ವಾರಗಳು ಅಥವಾ ವರ್ಷಗಳವರೆಗೂ ಸಂಭವಿಸಿರಬಹುದು.
- ಬೆದರಿಕೆಗಳು, ಸುಳ್ಳು ಭರವಸೆ / ಆಮಿಷಗಳು, ಬಲದ ಉಪಯೋಗ, ಸುಳ್ಳು/ತಪ್ಪು ಮಾಹಿತಿ ಕೊಡುವುದು ಮತ್ತು ಬಲವಂತ ಪಡಿಸುವ ಮೂಲಕ ದಾರಿತಪ್ಪಿಸಿ ವಯಸ್ಕರು ಮಕ್ಕಳನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳಬಹುದು.
ಈ ಎಲ್ಲವೂ ಮತ್ತು ಇಂತಹ ವಯಸ್ಕರ ವರ್ತನೆಗಳು, ಅದರಲ್ಲೂ ಪರಿಚಿತರು. ನಂಬಿಕೆಗೆ ಅರ್ಹರಾಗಿರುವವರಿಂದ ಮಕ್ಕಳ ಮೇಲೆ ಆದಾಗ, ಮಕ್ಕಳಿಗೆ ಮುಜುಗರವಾಗುತ್ತದೆ. ಭಯವಾಗುತ್ತದೆ, ಗಲಿಬಿಲಿಯಾಗುತ್ತದೆ ಮತ್ತು ತಮ್ಮ ಮೇಲೆ ತಮಗೇ ಅಸಹ್ಯ ಉಂಟಾಗಬಹುದು. ಇಂತಹ ಸಂದರ್ಭಗಳಲ್ಲಿ ಮಕ್ಕಳು ಹೆದರಿ, ಒಂಟಿಯಾಗಿ ದುಃಖಿಸುತ್ತಾ ಕೂರದೆ, ಅವರಿಗೆ ಯಾರಲ್ಲಿ ನಂಬಿಕೆ ಇದೆಯೋ ಅಂತಹ ಪೋಷಕರು, ಆಪ್ತಸಮಾಲೋಚಕರು. ವೈದ್ಯರು, ಮುಂತಾದವರಲ್ಲಿ ತಿಳಿಸುವಂತೆ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು. ಮಕ್ಕಳ ಮೇಲೆ ಲೈಂಗಿಕ ಶೋಷಣೆ ಮಾಡಿದವರ ವಿರುದ್ಧ ಪೊಲೀಸ್ ದೂರು ದಾಖಲಾಗುವಂತೆ ಮಾಡಬೇಕು.





















