HomeKarnatakaಟನಲ್ ರಸ್ತೆಗಿಂತ ಮೆಟ್ರೋದಿಂದಲೇ ಪರಿಣಾಮಕಾರಿಯಾಗಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ: ರಾಜ್ಯಪಾಲರಿಗೆ ವರದಿ ಸಲ್ಲಿಸಿದ IISC

ಟನಲ್ ರಸ್ತೆಗಿಂತ ಮೆಟ್ರೋದಿಂದಲೇ ಪರಿಣಾಮಕಾರಿಯಾಗಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ: ರಾಜ್ಯಪಾಲರಿಗೆ ವರದಿ ಸಲ್ಲಿಸಿದ IISC

ಬೆಂಗಳೂರು: ಟನಲ್ ರಸ್ತೆ ವಿರೋಧಿಸಿ ಹಲವರು ನಡೆಸುತ್ತಿದ್ದ ಪ್ರತಿಭಟನೆಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ) ನೀಡಿರುವ ವರದಿ ಮತ್ತಷ್ಟು ಬಲ ನೀಡಿದಂತಾಗಿದೆ. ಬೆಂಗಳೂರಿನ ಹೆಬ್ಬಾಳ ಟನಲ್ ರಸ್ತೆ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಐಐಎಸ್​ಸಿ ತಜ್ಞರ ತಂಡ, ಟನಲ್‌ನಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಮೆಟ್ರೋವೇ ಸಂಚಾರ ದಟ್ಟಣೆಗೆ ಉತ್ತಮ ಪರಿಹಾರವಾಗಿದೆ ಎಂದು ರಾಜ್ಯಪಾಲರಿಗೆ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಹೆಬ್ಬಾಳ ಜಂಕ್ಷನ್‌ ಟ್ರಾಫಿಕ್‌ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಟನಲ್ ರಸ್ತೆ ನಿರ್ಮಿಸಲು ಹೊರಟಿದ್ದ ರಾಜ್ಯ ಸರ್ಕಾರಕ್ಕೆ ಐಐಎಸ್​ಸಿ ವರದಿ ಶಾಕ್ ನೀಡಿದೆ. ಹೆಬ್ಬಾಳ ಟನಲ್ ರಸ್ತೆ ಯೋಜನೆಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದರಿಂದ ಟ್ರಾಫಿಕ್ ಸಮಸ್ಯೆ ಬಗೆಹರಿಯಲ್ಲ. ಬದಲಾಗಿ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಐಐಎಸ್​ಸಿ ತಜ್ಞರ ತಂಡ ರಾಜ್ಯಪಾಲರಿಗೆ ವರದಿ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ ಟ್ರಾಫಿಕ್‌ಗೆ 2.28 ಕಿಲೋಮೀಟರ್‌ನ ಟನಲ್ ರಸ್ತೆ ಯಾವುದೇ ಶಾಶ್ವತ ಪರಿಹಾರವಲ್ಲ ಎಂದು ಐಐಎಸ್​ಸಿ ಸಂಶೋಧನಾ ತಂಡ ಸ್ಪಷ್ಟಪಡಿಸಿದೆ. ಈ ಸುರಂಗ ಮಾರ್ಗದಿಂದ ಸ್ಥಳೀಯವಾಗಿ ಮಾತ್ರ ತಾತ್ಕಾಲಿಕ ರಿಲೀಫ್ ಸಿಗಬಹುದಷ್ಟೇ. ಆದರೆ ಸುರಂಗದ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳಲ್ಲಿ ಸಂಚಾರ ದಟ್ಟಣೆ ಮುಂದುವರಿಯಲಿದೆ.

ವಿಶೇಷವಾಗಿ ವೆಟರ್ನರಿ ಆಸ್ಪತ್ರೆ ಹಾಗೂ ಎಸ್ಟೀಮ್ ಮಾಲ್ ಬಳಿ ಹೊಸ ಚೋಕ್‌ಪಾಯಿಂಟ್‌ಗಳು ಸೃಷ್ಟಿಯಾಗಲಿದ್ದು, ವಾಹನಗಳು ಸುರಂಗದೊಳಗೇ ಸಾಲುಗಟ್ಟಿ ನಿಲ್ಲುವ ಭೀತಿ ವ್ಯಕ್ತವಾಗಿದೆ. 2040ಕ್ಕೆ ಈ ಯೋಜನೆ ಪೂರ್ಣಗೊಂಡರೂ ಹೆಬ್ಬಾಳದಿಂದ ಮೇಕ್ರಿ ಸರ್ಕಲ್‌ವರೆಗೆ ಟ್ರಾಫಿಕ್ ದಟ್ಟಣೆ ಕಡಿಮೆಯಾಗುವುದಿಲ್ಲ ಎಂದು ಐಐಎಸ್​ಸಿ ತಜ್ಞರು ಕರ್ನಾಟಕ ರಾಜ್ಯಪಾಲರಿಗೆ ವರದಿ ನೀಡಿದ್ದಾರೆ.

ಹೆಬ್ಬಾಳ ಟನಲ್ ರಸ್ತೆ ವಿಚಾರದಲ್ಲಿ ರಸ್ತೆಯ ಸಾಮರ್ಥ್ಯವನ್ನು ತೀರಾ ಕಡಿಮೆ ಅಂದಾಜಿಸಲಾಗಿದ್ದು, ಶೇಕಡ 50ರಿಂದ 80ರಷ್ಟು ಟ್ರಾಫಿಕ್ ಡೈವರ್ಷನ್ ಆಗುತ್ತದೆ ಎಂಬ ಲೆಕ್ಕಾಚಾರ ಸಂಪೂರ್ಣ ಅವೈಜ್ಞಾನಿಕವಾಗಿದೆ. ಎಸ್ಟೀಮ್ ಮಾಲ್ ಬಳಿಯ 60 ಮೀಟರ್‌ ತಿರುವು ವಾಹನಗಳ ವೇಗ ತಗ್ಗಿಸಿ, ಸಾಮರ್ಥ್ಯ ಕುಸಿತಕ್ಕೆ ಕಾರಣವಾಗಲಿದೆ. ಇದಲ್ಲದೆ, ಹೆಬ್ಬಾಳ ಕೆರೆಯ ಕ್ಯಾಚ್‌ಮೆಂಟ್ ಪ್ರದೇಶದಲ್ಲೇ ಸುರಂಗ ನಿರ್ಮಿಸುವುದರಿಂದ ಭಾರಿ ಮಳೆಯಾದಾಗ ಟನಲ್ ಒಳಗಡೆ ಪ್ರವಾಹ ಸೃಷ್ಟಿಯಾಗುವ ಅಪಾಯವಿದೆ. ಇದು ಹೆಬ್ಬಾಳ ಕೆರೆ, ಪಾರ್ಕ್ ಹಾಗೂ ಹಾಲಿ ಇರುವ ಫ್ಲೈಓವರ್ ಪಿಲ್ಲರ್‌ಗಳ ಅಡಿಪಾಯಕ್ಕೂ ಅಪಾಯ ತಂದೊಡ್ಡಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಯಲ್ಲಿ ಪ್ರಾರಂಭಿಕ ಅಂದಾಜಿಗಿಂತ ಸುಮಾರು ಆರು ಪಟ್ಟು ವೆಚ್ಚ ಹೆಚ್ಚಾಗಲಿದ್ದು, ಟೋಲ್ ದರವೂ ಹೆಚ್ಚಳವಾಗಲಿದೆ. ಇದು ಸಾಮಾನ್ಯ ಜನರ ಓಡಾಟಕ್ಕೆ ಅನುಕೂಲವಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಯಾವುದೇ ವೈಜ್ಞಾನಿಕ ಅಧ್ಯಯನ ನಡೆಸದೆ ಸರ್ಕಾರ ಟೆಂಡರ್ ಕರೆದಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿರುವ ತಜ್ಞರ ತಂಡ, ತಕ್ಷಣ ಕಾಮಗಾರಿ ತಡೆಹಿಡಿಯುವಂತೆ ರಾಜ್ಯಪಾಲರಿಗೆ ಮನವಿ ಮಾಡಿದೆ.

ಒಟ್ಟಾರೆ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಟನಲ್ ರಸ್ತೆಗಿಂತ ಮೆಟ್ರೋ ಹಾಗೂ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದೇ ಸೂಕ್ತ ಎಂದು ಐಐಎಸ್ ಸಿ ಶಿಫಾರಸು ಮಾಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಯಾವ ನಿರ್ಧರಾ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular