ಬೆಂಗಳೂರು: ಸ್ವಲ್ಪ ಮಸಾಲೆಯುಕ್ತ ಆಹಾರ ತಿಂದರೂ ಸಾಕು, ಎದೆಯ ಮಧ್ಯಭಾಗದಲ್ಲಿ ಸುಡುವಂತಹ ಅನುಭವವಾಗುತ್ತಿದೆಯೇ? ಗಂಟಲಿನವರೆಗೂ ಹುಳಿ ತೇಗು ಬಂದು ಕಿರಿಕಿರಿ ಉಂಟುಮಾಡುತ್ತಿದೆಯೇ? ಹಾಗಿದ್ದರೆ ನೀವು ‘ಆಸಿಡ್ ರಿಫ್ಲಕ್ಸ್’ (Acid Reflux) ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದೇ ಅರ್ಥ. ಇಂತಹ ಸಂದರ್ಭದಲ್ಲಿ ತಕ್ಷಣ ಮೆಡಿಕಲ್ ಶಾಪ್‌ಗೆ ಹೋಗಿ ಆಂಟಾಸಿಡ್ ಮಾತ್ರೆ ನುಂಗುವ ಬದಲು, ನಮ್ಮ ಮನೆಯಲ್ಲೇ ಇರುವ ನೈಸರ್ಗಿಕ ಮದ್ದುಗಳ ಮೂಲಕ ಇದಕ್ಕೆ ಪೂರ್ಣವಿರಾಮ ಇಡಬಹುದು.
ಏನಿದು ಎದೆಯುರಿ? ವಿಜ್ಞಾನ ಏನು ಹೇಳುತ್ತೆ?
ವೈದ್ಯಕೀಯ ಭಾಷೆಯಲ್ಲಿ ಇದನ್ನು GERD ಎಂದು ಕರೆಯುತ್ತಾರೆ. ನಮ್ಮ ಹೊಟ್ಟೆಯಲ್ಲಿರುವ ಆಮ್ಲವು (Acid) ಅನ್ನನಾಳದ ಮೂಲಕ ಮೇಲಕ್ಕೆ ಚಲಿಸಿದಾಗ ಈ ಸುಡುವ ಭಾವನೆ ಉಂಟಾಗುತ್ತದೆ. ಸಾಮಾನ್ಯವಾಗಿ ಅನ್ನನಾಳದ ಕೊನೆಯಲ್ಲಿರುವ ‘ಸ್ಪಿಂಕ್ಟರ್’ ಎಂಬ ಕವಾಟವು ಆಮ್ಲ ಮೇಲೆ ಬರದಂತೆ ತಡೆಯುತ್ತದೆ. ಆದರೆ ನಾವು ಸೇವಿಸುವ ಅತಿಯಾದ ಎಣ್ಣೆ ಪದಾರ್ಥ ಅಥವಾ ಮಸಾಲೆ ಆಹಾರದಿಂದ ಈ ಕವಾಟ ದುರ್ಬಲಗೊಂಡು, ಎದೆಯುರಿ ಕಾಣಿಸಿಕೊಳ್ಳುತ್ತದೆ.
ಎದೆಯುರಿ ಬರಲು ಪ್ರಮುಖ ಕಾರಣಗಳೇನು?
ಅತಿಯಾದ ಎಣ್ಣೆ ಪದಾರ್ಥ, ಖಾರವಾದ ಮಸಾಲೆ, ಫಾಸ್ಟ್‌ಫುಡ್ ಹಾಗೂ ಅತಿಯಾಗಿ ಚಹಾ-ಕಾಫಿ ಕುಡಿಯುವುದು ಆಸಿಡಿಟಿಯನ್ನು ಹೆಚ್ಚಿಸುತ್ತದೆ.
ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು ಅಥವಾ ಊಟ ಮಾಡಿದ ತಕ್ಷಣವೇ ಹಾಸಿಗೆಗೆ ಸರಿಯುವುದು ಎದೆಯುರಿಗೆ ನೇರ ಆಹ್ವಾನ ನೀಡಿದಂತೆ.
ಅತಿಯಾದ ಮಾನಸಿಕ ಒತ್ತಡ ಕೂಡ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣವನ್ನು ಹೆಚ್ಚು ಮಾಡುತ್ತದೆ.
ಧೂಮಪಾನ ಮತ್ತು ಮದ್ಯಪಾನವು ನಮ್ಮ ಆಹಾರನಾಳದ ಸೂಕ್ಷ್ಮ ಒಳಪರದೆಗೆ ಹಾನಿ ಮಾಡುವುದರಿಂದ ಉರಿ ಉಂಟಾಗುತ್ತದೆ.
ಎದೆಯುರಿ ಲಕ್ಷಣಗಳು
ಎದೆಯ ಮಧ್ಯಭಾಗದಲ್ಲಿ ಬೆಂಕಿ ಬಿದ್ದಂತೆ ಸುಡುವ ಭಾವನೆ.
ಗಂಟಲಿನವರೆಗೂ ಕಹಿ ಅಥವಾ ಹುಳಿ ರುಚಿ ಬರುವುದು.
ಊಟವಾದ ನಂತರ ಹೊಟ್ಟೆ ವಿಪರೀತ ಉಬ್ಬರಿಸಿದಂತಾಗುವುದು.
ಕೆಲವೊಮ್ಮೆ ಗಂಟಲಿನಲ್ಲಿ ಆಹಾರ ಸಿಕ್ಕಿಹಾಕಿಕೊಂಡಂತೆ (Lump feeling) ಅನುಭವವಾಗುವುದು
ನೀವು ಎದೆಯುರಿಯಿಂದ ಬಳಲುತ್ತಿದ್ದರೆ ಇವುಗಳನ್ನು ಟ್ರೈ ಮಾಡಿ:
ಎಳನೀರು (Coconut Water): ಇದು ಪ್ರಕೃತಿಯೇ ನೀಡಿದ ಅತ್ಯುತ್ತಮ ‘ಕೂಲಂಟ್’. ಹೊಟ್ಟೆ ಮತ್ತು ಎದೆಯುರಿಗೆ ತಕ್ಷಣ ತಂಪು ನೀಡುತ್ತದೆ.
ಬಾಳೆಹಣ್ಣು: ಇದು ಆಮ್ಲದ ಮಟ್ಟವನ್ನು ಸಮತೋಲನಗೊಳಿಸುವ ನೈಸರ್ಗಿಕ ಶಕ್ತಿ ಹೊಂದಿದೆ.
ಜೀರಿಗೆ ನೀರು: ಜೀರಿಗೆ ಹಾಕಿ ಕುದಿಸಿ ಆರಿಸಿದ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಅದ್ಭುತವಾಗಿ ಸುಧಾರಿಸುತ್ತದೆ.
ತುಪ್ಪ ಮತ್ತು ಬಿಸಿ ಹಾಲು: ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ಶುದ್ಧ ತುಪ್ಪ ಬೆರೆಸಿ ಕುಡಿದರೆ, ಅದು ಉರಿಯನ್ನು ತಣ್ಣಗಾಗಿಸಿ ಹೊಟ್ಟೆಯ ಒಳಪದರಕ್ಕೆ ಮೃದುತ್ವ ನೀಡುತ್ತದೆ.
ಅಲೋವೆರಾ ಜ್ಯೂಸ್: ಇದು ಆಹಾರನಾಳಕ್ಕೆ ಶಮನ ನೀಡಿ, ಆಮ್ಲದ ಹರಿವನ್ನು ನಿಯಂತ್ರಿಸುತ್ತದೆ.

